ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿಯಿಲ್ಲದ ಮನೆ ಮನೆಯೇ ಅಲ್ಲ, ಅಜ್ಜಿಯಿಲ್ಲದ ಊರಿಗೆ ಹೋಗೋಕೆ ಇಷ್ಟವಿಲ್ಲ, ಮಗಳಿಲ್ಲದ ಮನದಲ್ಲಿ ಖುಷಿಯೇ ಇಲ್ಲ, ಮಡದಿಯಿಲ್ಲದೇ ಜೀವನವೇ ಇಲ್ಲ…
ಎಷ್ಟು ಸ್ಥಾನಗಳಿಗೆ ಹೆಣ್ಣಿಗೆ? ಹುಟ್ಟುತ್ತಲೇ ಮಗಳಾಗಿ, ತಮ್ಮನಿಗೆ ಪ್ರೀತಿಯ ಅಕ್ಕನಾಗಿ, ಸ್ಮೇಹಿತರ ಖುಷಿಯಾಗಿ, ಪ್ರಿಯಕರನ ನಂಬಿಕೆಯಾಗಿ, ಗಂಡನ ಅದೃಷ್ಟಲಕ್ಷ್ಮಿಯಾಗಿ, ಮಮತೆ ತುಂಬಿದ ತಾಯಾಗಿ, ಮೊಮ್ಮಕ್ಕಳ ಫೇವರೆಟ್ ಅಜ್ಜಿಯಾಗಿ.. ಎಲ್ಲರ ನೆನಪಿನಲ್ಲಿ ಉಳಿಯುವ ಜೀವವಾಗಿ..
ಹೌದು ಈ ಎಲ್ಲ ಜೀವಗಳಿಗೂ ನಮ್ಮ ಜೀವನದಲ್ಲಿ ಇರೋದಕ್ಕೆ ಥ್ಯಾಂಕ್ಸ್ ಎಂದು ಹೇಳಿಬಿಡಿ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಇಂದು ಮಹಿಳೆಯರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆಗಳನ್ನು ಗುರುತಿಸುವ ದಿನವಾಗಿದೆ.
ಇನ್‌ಕ್ಲೂಷನ್ ಇನ್ಸ್‌ಪೈರ್ ( Inclusion Inspire) ಈ ಬಾರಿ ಮಹಿಳಾ ದಿನದ ಥೀಮ್ ಆಗಿದೆ. ಕಾಲ ಎಷ್ಟೇ ಮುಂದುವರಿದಿದೆ ಎಂದುಕೊಂಡಿದ್ದರೂ ಮುಟ್ಟಿನ ಮೂರು ದಿನ ಮನೆಯಿಂದ ಹೊರಗೆ ಕೂರುವ ಹೆಣ್ಣುಮಕ್ಕಳಿದ್ದಾರೆ, ತಂದೆಯ ಬಳಿ ಪ್ಯಾಡ್ ತರಲು ಹೇಳಲು ಹಿಂದುಮುಂದು ನೋಡುವ ಹುಡುಗಿಯರಿದ್ದಾರೆ. ಇಷ್ಟವಿಲ್ಲದಿದ್ದರೂ ಬಲತ್ಕಾರಕ್ಕೊಳಗಾಗುವ ಮಾನಿನಿಯರಿದ್ದಾರೆ, ಪೌಡರ್ ಖರೀದಿ ಮಾಡಲು ಗಂಡನ ಬಳಿ ಹಣ ಕೇಳುವ ಡಬಲ್ ಡಿಗ್ರಿ ಗ್ರಾಜುಯೇಟ್ಸ್ ಇದ್ದಾರೆ.
ಪ್ರತೀ ದಿನವೂ ಪ್ರತೀ ಹೆಣ್ಣುಮಗು ಸ್ವಾವಲಂಬಿಯಾಗುವ ಪ್ರಯತ್ನ ಮಾಡುವಂತಾಗಲಿ, ಒಪ್ಪಿಗೆ ಇಲ್ಲದೆ ಸ್ಪರ್ಶಿಸಿದಾತನಿಗೆ ಬುದ್ಧಿ ಕಲಿಸುವಂತಾಗಲಿ. ಕಷ್ಟಪಟ್ಟು ದುಡಿಯುವ, ಮನೆ ಆಫೀಸ್‌ನಲ್ಲಿ ಜೀವ ಸವೆಸುವ, ಮನೆಗಳಲ್ಲೇ ಇದ್ದು ಎಲ್ಲರ ಕ್ಷೇಮ ನೋಡಿಕೊಳ್ಳುವ, ದೊಡ್ಡದೊಡ್ಡ ಸ್ಥಾನದಿಂದ ಹಿಡಿದು ಅಡುಗೆ ಮನೆಯ ಹುಡುಗಿಯವರೆಗೂ ಎಲ್ಲರದ್ದೂ ಅವರದ್ದೇ ಆದ ಸಾಧನೆ ಇದ್ದೇ ಇದೆ. ಈ ಎಲ್ಲ ಹೆಣ್ಣುಮಕ್ಕಳಿಗು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು.