ಜೆಇಇ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜೆಇಇ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ 18 ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.

ಅದಿತಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಅದಿತಿ ಉತ್ತರ ಪ್ರದೇಶದ ಗೋರಖ್‌ಪುರದ ಕ್ಯಾಂಟ್ ಪೊಲೀಸ್ ಠಾಣೆಯಿರುವ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಳು. 2 ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಾ, ಸತ್ಯದೀಪ ವಿದ್ಯಾರ್ಥಿ ನಿಲಯದಲ್ಲಿದ್ದಳು.

ಜೆಇಇ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಬುಧವಾರ ಬೆಳಗ್ಗೆ ಮನೆಗೆ ಕರೆಮಾಡಿ ತಂದೆಯ ಬಳಿ ಮೊಬೈಲ್ ಫೋನ್‌ಗೆ ರಿಚಾರ್ಜ್ ಮಾಡುವಂತೆ ಹೇಳಿದ್ದಳು. ಅದೇ ಸಮಯದಲ್ಲಿ, ಅದಿತಿಯ ರೂಮ್‌ಮೇಟ್ ಹೊರಗೆ ಹೋಗಿದ್ದರು. ಹೊರಗಡೆ ಹೋಗಿದ್ದ ರೂಮ್‌ಮೇಟ್ ವಾಪಾಸಾಗಿದ್ದು, ರೂಮ್ ಬಾಗಿಲು ಬಡಿದಿದ್ದಾಳೆ. ಈ ವೇಳೆ ಅದಿತಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ ಅನುಮಾನಗೊಂಡು ಕಿಟಕಿಯಿಂದ ಒಳಗೆ ನೋಡಿದಾಗ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಬಳಿಕ ಆಕೆಯ ರೂಮ್‌ಮೇಟ್ ಹಾಸ್ಟೆಲ್ ವಾರ್ಡನ್‌ಗೆ ವಿಷಯ ತಿಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ. ನಿಮ್ಮ ಆಸೆಯನ್ನು ನನ್ನಿಂದ ಈಡೇರಿಸಲಾಗಲಿಲ್ಲ. ಇಲ್ಲಿಗೆ ನನ್ನ ನಿಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇನೆ. ನೀವು ನನಗೆ ಬೇಕಾದಷ್ಟು ಪ್ರೀತಿ ನೀಡಿದ್ದೀರಿ. ದಯವಿಟ್ಟು ಅಳಬೇಡಿ. ನಿಮ್ಮ ಕನಸುಗಳನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಅವಳು ನಿಮ್ಮ ಕನಸುಗಳನ್ನು ಈಡೇರಿಸುತ್ತಾಳೆ. ನಿಮ್ಮ ಪ್ರೀತಿಯ ಅದಿತಿ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದಿತಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ತ್ಯಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!