ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಷಯ ತಣ್ಣಗಾಗಿಲ್ಲ, ಡಿಸಿಎಂ ಡಿ ಕೆ ಶಿವಕುಮಾರ್ ದಾವೋಸ್ ಗೆ ಪ್ರಯಾಣಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದರು. ಇವೆಲ್ಲದರ ಮಧ್ಯೆ ಇಂದು ಮಾಜಿ ಸಂಸದ ಡಿ ಕೆ ಸುರೇಶ್ ಬೆಂಗಳೂರಿನಲ್ಲಿ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಪಕ್ಷದ ವರಿಷ್ಠ, ಲೋಕಸಭೆ ನಾಯಕ ರಾಹುಲ್ ಗಾಂಧಿ ಅವರು ತಾಳ್ಮೆಯಿಂದ ಇರಿ ಎಂದು ಹೇಳಿದ್ದಾರೆ, ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದಾಗಲೂ ಕೂಡ ಅದೇ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸೂಕ್ತ ಸಂದರ್ಭದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ, ಪಕ್ಷ ಹಿತದೃಷ್ಟಿಯಿಂದ, ಶಾಸಕರ ಹಿತದೃಷ್ಟಿಯಿಂದ ಕಾಯುತ್ತಿದ್ದೇವೆ ಎಂದು ಡಿಕೆ ಸುರೇಶ್ ಹೇಳಿದರು.
ರಾಜಕೀಯದಲ್ಲಾಗಲಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಾಗಲಿ ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರೋದಿಲ್ಲ, ಒಲಿಯುವುದಿಲ್ಲ, ನಮ್ಮ ಅಣ್ಣನ ಹಣೆ ಬರಹದಲ್ಲಿ ಬರೆದಿದ್ದರೆ ಸಿಎಂ ಆಗ್ತಾರೆ, ಸಿಎಂ ಸ್ಥಾನ ಅಷ್ಟು ಸುಲಭವಾಗಿ ಒಲಿದು ಬರುವುದಿಲ್ಲ,ಡಿಕೆ ಶಿವಕುಮಾರ್ ಮೊದಲಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಅವರ ಹಣೆಬರಹದಲ್ಲಿದ್ದರೇ ಸಿಎಂ ಆಗುತ್ತಾರೆ ಎಂದರು.
ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರರ ಎಲ್ಲಾ ದೃಷ್ಟಿಕೋನ ಇಟ್ಟುಕೊಂಡು ಚಿಂತನೆ ಮಾಡ್ತಾರೆ, ನಾನು ಶಿವಕುಮಾರ್ ದೃಷ್ಟಿಯಿಂದ ನೋಡುತ್ತೇನೆ, ಮಂತ್ರಿ ಆಗುವವರು ಅವರ ದೃಷ್ಟಿಯಿಂದ ಮಾತ್ರ ನೋಡುತ್ತಾರೆ. ಚೇರ್ಮನ್ ಆಗುವವರು ಅವರ ದೃಷ್ಟಿಕೋನದಿದ ನೋಡ್ತಾರೆ, ಆದರೆ ರಾಷ್ಟ್ರ ನಾಯಕರು ಎಲ್ಲಾ ಕೋನಗಳಿಂದ ನೋಡಬೇಕಾಗುತ್ತದೆ ಎಂದರು.
ನಮ್ಮ ಗುರಿ ಇರುವುದು 2028 ಚುನಾವಣೆ ಗುರಿ, ಶಾಸಕರ, ಪಕ್ಷ, ಕಾರ್ಯಕರ್ತರ ದೃಷ್ಟಿಯಿಂದ ತಾಳ್ಮೆಯಿಂದ ಇರಬೇಕಾಗುತ್ತದೆ, ಅವರೇ ಅಧ್ಯಕ್ಷರು ಆಗಿರುವುದರಿಂದ ಶಿಸ್ತು ಕಾಪಾಡಿಕೊಳ್ಳಬೇಕಾಗುತ್ತದೆ ಎಂದರು.


