ಹೊಸದಿಗಂತ ವರದಿ ರಾಯಚೂರು:
ಗೆಳೆಯರ ನಡುವೆ ಮದ್ಯದ ಅಮಲಿನಲ್ಲಿ ಜರುಗಿದ ಜಗಳ ಓರ್ವನ ಹತ್ಯೆಯಲ್ಲಿ ಅಂತ್ಯವಾದ ಘಟನೆ ಶುಕ್ರವಾರ ಮಧ್ಯ ರಾತ್ರಿ ನಡೆದಿದೆ.
ಜಹಿರಾಬಾದ್‌ನ ವಿಶಾಲ(21) ಎನ್ನುವವನೇ ಹತ್ಯೆ ಆಗಿರುವ ಯುವಕ ಎಂದು ಗುರುತಿಸಲಾಗಿದೆ.
ಹತ್ಯೆ ಆಗಿರುವ ವಿಶಾಲ ಹಾಗೂ ಇವನ ಸ್ನೇಹಿತರಾದ ಜಹಿರಾಬಾದ್ ನಗರದ ರಾಜು @ ಯೇಸು ಹಾಗೂ ಬಸವರಾಜ ಎನ್ನುವ ಮೂವರು ಸೇರಿ ಮಾವಿನ ಕೆರೆ ಹತ್ತಿರ ಮದ್ಯ ಸೇವನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜು ಹಾಗೂ ಬಸವರಾಜ ಇಬ್ಬರು ಸೇರಿ ವಿಶಾಲ ಜೊತೆ ಜಗಳವಾಡಿದ್ದಾರೆ. ಕುಡಿದ ಮತ್ತಿನಲ್ಲಿ ವಿಶಾಲನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಶಾಲ ಸ್ಥಳದಲ್ಲಿನೇ ಪ್ರಾಣ ಬಿಟ್ಟಿದ್ದಾನೆ. ವಿಶಾಲನನ್ನು ಹತ್ಯೆ ಮಾಡಿರುವ ರಾಜು ಹಾಗೂ ಬಸವರಾಜ ಇಬ್ಬರೂ ಸ್ವತಃ ಪೊಲೀಸ್ ಠಾಣೆಗೆ ಬಂದು ತಾವೇ ವಿಶಾಲನನ್ನು ಹತ್ಯೆ ಮಾಡಿರುವದಾಗಿ ಒಪ್ಪಿಕೊಂಡು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಹೆಚ್ಚಿನ ತನಿಖೆಯನ್ನು ಮಾಡುವಂತೆ ಸದರ್ ಬಜಾರ್ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ವಿಶೇಷವಾಗಿ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಇಂತಹ ಘಟನೆಗಳು ಮದ್ಯಪಾನ ಮಾಡಿದ ಸಂದರ್ಭದಲ್ಲಿ ಹೆಚ್ಚಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.
ಆದರೆ, ಈ ರೀತಿಯ ಅಪರಾಧಗಳು ಜರಗುತ್ತಿರುವುದಕ್ಕೆ ಮದ್ಯಪಾನದ ಪ್ರಭಾವವಲ್ಲ ಬದಲಿಗೆ ಗಾಂಜಾ ಸೇವನೆಯೇ ಪ್ರಮುಖ ಕಾರಣವೆಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ. ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಗಾಂಜಾ ಬೆಳೆಯುವವರ ಹಾಗೂ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಹೀಗಾಗಿ ಸುಲಭದಲ್ಲಿ ದೊರೆಯುವ ಗಾಂಜಾದ ಸೇವನೆಗೆ ಯುವ ಜನತೆ ಬಲಿಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.



