ನಿರೂಪಣೆ: ಸುರೇಶ್ ಡಿ. ಪಳ್ಳಿ
ಅಯ್ಯೋ… ನೀನಿನ್ನು ಇಲ್ಲ, ಎನ್ನಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಹೃದಯ ಭಾರವಾಗುತ್ತಿದೆ. ಕಣ್ಣು ಮಂಜಾಗುತ್ತಿದೆ. ನೂರಾರು ವರ್ಷಗಳಿಂದ ನನ್ನಂತಹ ಸಾವಿರಾರು ಮಂದಿಗೆ ಆಸರೆಯಾಗಿದ್ದ ನಿನ್ನನ್ನು ಮರೆಯುವುದಾದರೂ ಹೇಗೆ ಸಾಧ್ಯ?
ಮಂಗಳೂರು ನಗರ ಕಾಂಕ್ರಿಟೀಕರಣಗೊಂಡಾಗ ನಿನಗೂ ಆಪತ್ತು ಬಂದಿತ್ತು. ಆದರೆ ಒಂದಷ್ಟು ಮಂದಿಯ ಒತ್ತಾಸೆಯಿಂದಾಗಿ ನೀನುಳಿದೆ. ಲೇಡಿಹಿಲ್ ಪರಿಸರಕ್ಕೂ ಕಳೆ ತಂದೆ. ಆದರೆ ಸುತ್ತಲಿನ ಕಾಂಕ್ರಿಟ್ ಕಾಡು ನಿನ್ನನ್ನು ಒಳಗೊಳಗೇ ಬೇಯುವಂತೆ ಮಾಡಿತು… ಉಸಿರುಗಟ್ಟುವಂತೆ ಮಾಡಿತು. ಆದರೂ ನೋವನ್ನು ಅದುಮಿಟ್ಟು ನೀ ನೆರಳನ್ನಿತ್ತೆ. ಆಸರೆ ಕೋರಿ ಬಂದ ನನ್ನಂತವರಿಗೆ ಬದುಕು ಕೊಟ್ಟೆ.
ಪರೋಪಕಾರಿ ನೀನು
ಬೇಸಿಗೆ ಕಾಲದಲ್ಲಿ ನಿತ್ಯ ನಿನ್ನ ಆಶ್ರಯ ಪಡೆದವರಿಗೆ ಲೆಕ್ಕವಿಲ್ಲ. ಪಕ್ಕದಲ್ಲೇ ಬಸ್ ತಂಗುದಾಣವಿದ್ದರೂ ನೆರಳಿಗಾಗಿ ನಿನ್ನ ಬಳಿ ಸಾಗುತ್ತಿದ್ದರು. ತಮ್ಮ ವಾಹನಕ್ಕೆ ಬಿಸಿಲು ಬೀಳದಿರಲೆಂದು ನಿನ್ನ ಪಕ್ಕವೇ ಪಾರ್ಕ್ ಮಾಡಲಾರಂಭಿಸಿದ್ದರು. ಅವರನ್ನೂ ನೀ ದೂರ ತಳ್ಳಲಿಲ್ಲ. ಒಡೆದು ಹೋದ ದೇವರ ಪೋಟೋ, ಗಾಜು, ಚಪ್ಪಲಿ ಎಲ್ಲವನ್ನೂ ತಂದು ನಿನ್ನೊಳಗೆ ತುರುಕಿದರೂ ನಗರದ ‘ಬುದ್ಧಿವಂತ’ ಜನ. ಆದರೂ ನೀ ತಾಳ್ಮೆ ಕಳೆದುಕೊಳ್ಳಲಿಲ್ಲ. ಕೆಲವರು ನಿನ್ನ ಸುತ್ತ ಅದೇನೋ ನೂಲು ತಂದು ಸುತ್ತಲಾರಂಭಿಸಿದರು.
ದಿನೇ ದಿನೇ ಇದು ಹೆಚ್ಚಾದರೂ ಅದೆಲ್ಲವನ್ನೂ ಸಹಿಸಿಕೊಂಡೆ ನೀ. ಅವರ ನಂಬಿಕೆ ಘಾಸಿಗೊಳಿಸಲಿಲ್ಲ. ಬಂದವರಿಗೆಲ್ಲಾ ನೀ ಆಸರೆಯಾದೆ. ನೀ ಬೆಳೆಯುತ್ತಲೇ ಇದ್ದೆ, ಆದರೆ ನಿನ್ನ ಬೇರುಗಳು ಸುತ್ತ ಹರಡಿಕೊಳ್ಳಲು ಜಾಗವಿರಲಿಲ್ಲ. ಅಷ್ಟರ ಮಟ್ಟಿಗೆ ಕಾಂಕ್ರಿಟ್‌ನಿಂದ ನಿನ್ನನ್ನು ಅದುಮಿಟ್ಟಿದ್ದರು ಅನಾಗರಿಕ ಜನ!. ಆದರೂ ನೋವ ನುಂಗಿ ಬೆಳೆದೆ ನೀ. ಇನ್ನು ನೋವು ಸಹಿಸಲು ಸಾಧ್ಯವಾಗಿಲ್ಲವೇನೋ ನಿನಗೆ. ತೀರ್ಮಾನ ಮಾಡಿ ಬಿಟ್ಟೆ ನೀ ಕೊನೆಯುಸಿರೆಳೆಯಲು.
ಕೊನೆಯುಸಿರೆಳೆದಾಗ ಯಾರೂ ಇರಲಿಲ್ಲ!
ಜುಲೈ 22ರ ರಾತ್ರಿಯ ಆ ಜೋರು ಮಳೆ ನಿನಗೆ ಮುಕ್ತಿ ಕಾಣಿಸಲೆಂದೇ ಬಂದಿರಬೇಕು. ಆ ಮಳೆ ಹನಿಯ ನಡುವೆ ನೀನಿಟ್ಟ ಕಣ್ಣೀರಿಗೆ, ನೋವಿನ ಕೊನೆಯ ಮಾತಿಗೆ ದನಿಯಾಗುವವರು ಅಲ್ಲಿ ಯಾರೂ ಇರಲಿಲ್ಲ. ಅಂತೂ
ಕೊನೆಯುಸಿರು ಎಳೆದೇ ಬಿಟ್ಟೆ
ಸಾಯುವಾಗಲೂ ನೀ ಯಾರಿಗೂ ಹಾನಿ ಮಾಡಲಿಲ್ಲ. ಹಗಲಾದರೆ ಸಾವಿರಾರು ಮಂದಿ ನಿನ್ನ ಬಳಿಯೇ ಇರುತ್ತಿದ್ದರು. ಅವರಿಗೆ ನಿನ್ನಿಂದ ತೊಂದರೆಯಾಯಿತೆಂದೂ ಇಹಲೋಕ ತ್ಯಜಿಸಲು ರಾತ್ರಿಯನ್ನೇ ಆಯ್ಕೆ ಮಾಡಿಕೊಂಡೆಯಾ? ಯಾರೂ ಇಲ್ಲದ ಸಮಯವನ್ನು ನೋಡಿ ಧರೆಗುರುಳಿ ಬಿಟ್ಟೆ ನೀ. ಓ ಆಲದ ಮರವೇ
ನೀನೆಷ್ಟು ಕರುಣಾಮಯಿ
ನೋವಿನ ನಿನ್ನ ಚೀರಾಟ ಯಾರಿಗೂ ಕೇಳಲಿಲ್ಲವೆಂದರಿತೆಯಾ?
ನೀ ನೂರಾರು ವರ್ಷ ಬಾಳಿರಬಹುದು. ಆದರೆ ಕಳೆದ ಕೆಲವು ವರ್ಷದಿಂದಲಾದರೂ ನಿನ್ನೊಡನೆ ಕಾಲ ಕಳೆದಿರುವೆ ನಾನು. ಎಲ್ಲಿಂದಲೋ ನಾ ಬಂದಾಗ ನನಗೂ ಆಶ್ರಯ ನೀಡಿದ್ದೆ ನೀನು. ಶನಿವಾರದ ಜೋರು ಮಳೆಗೆ ನೀ ಇಳೆಗೆ ಬಿದ್ದಾಗ ನೋವಿನಿಂದ ನಾನೂ ಚೀರಾಡಿದ್ದೆ. ಆದರೆ ಆ ಕಗ್ಗತ್ತಲ್ಲಿ ನನ್ನ ಚೀರಾಟ ಯಾರಿಗೂ ಕೇಳಲಿಲ್ಲ. ನೀ ಧರೆಗೆ ಬಿದ್ದಾಗ ಬಂದ ಮಂದಿ ಅಯ್ಯೋ ಸಂಚಾರ ಅಸ್ತವ್ಯಸ್ತವಾಯಿತೆಂದು ಗೋಳಿರೆಟ್ಟರೇ ವಿನಃ ನಿನ್ನ ನೋವನ್ಯಾರು ಕೇಳಲೇ ಇಲ್ಲ. ಕತ್ತಿ, ಗರಗಸ ತಂದ ಆ ಮಂದಿ ನಿನ್ನ ಕೈಕಾಲುಗಳನ್ನು ಕಡಿಯಾರಂಭಿಸಿದರು. ಅವರಿಗೂ ತ್ರಾಸವಾಗದಿರಲೆಂದು ಮೈಯೊಡ್ಡಿದೆ ನೀನು.
ನೋಡು ನೋಡುತ್ತಿದ್ದಂತೆ ತುಂಡು ತುಂಡಾಗಿ ನಿನ್ನನ್ನು ಕತ್ತರಿಸಿಯೇಬಿಟ್ಟರು. ಅಯ್ಯೋ, ಕೊನೆಯುಸಿರೆಳೆದಾಗಲೂ ನೀನೆಷ್ಟು ಪರೋಪಕಾರಿಯಾಗಿದ್ದೆ!. ನೂರಾರು ವರುಷ ಅದೆಷ್ಟೋ ಮಂದಿಗೆ ಆಸರೆಯಾಗಿದ್ದ ನೀನು ಇನ್ನಿಲ್ಲ ಎಂದು ಹೇಗೆ ಹೇಳಲಿ. ಕಣ್ಣು ಮಂಜಾಗುತ್ತಿದೆ. ನಿನ್ನ ನೆನಪು ಮಾಡಿಕೊಂಡಾಗ ದುಃಖ ಒತ್ತರಿಸಿ ಬರುತ್ತಿದೆ. ನಿನ್ನ ನೆನಪಿನೊಂದಿಗೆ ನಾನಿಲ್ಲೇ ಪಕ್ಕದಲ್ಲಿಆಶ್ರಯ ಪಡೆದಿರುವೆ… ಬಂದವರಿಗೆ ನಿನ್ನ ಕಥೆ ಹೇಳುವೆ.
ಹ್ಹಾಂ ಮರೆತೆ, ಯಾರೋ ಸಹೃದಯಿಯೊಬ್ಬರು ನೀನಿದ್ದ ಜಾಗದಲ್ಲಿ ನಿನ್ನ ನೆನಪ ಶಾಶ್ವತವಾಗಿಸುವ ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ. ಆ ದಿನಕ್ಕಾಗಿ ಕಾಯುತ್ತಿದ್ದೇನೆ. ಓ ಆಲದ ಮರವೇ ಮತ್ತೆ ಚಿಗುರೊಡೆದು ಬಾ!
ನಿನಗಾಗಿ ಕಾಯುತ್ತಿರುವೆ…..
-ಇಂತಿ,
ನಿನ್ನ ಆಸರೆ ಪಡೆದಿದ್ದ ನಿನ್ನ ಪ್ರೀತಿಯ ….ಚೀಂವ್ ಚೀಂವ್