ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಹಿನ್ನೆಲೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರೈತರಿಗೆ ಪ್ರಸಕ್ತ ಸಾಲಿನಲ್ಲಿ ೨ನೇ ಬೆಳೆಗೆ ನೀರಿನ ಅಭಾವ ಎದುರಾಗಿದ್ದರೂ, ಎದೆಗುಂದದ ಕೆಲವು ರೈತರು ತಮ್ಮ ಗದ್ದೆಗಳನ್ನು ಖಾಲಿ ಬಿಡದೆ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ನೀಡುವ ಸಾಸಿವೆ ಕೃಷಿಗೆ ಮುಂದಾಗಿದ್ದಾರೆ.
ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ನೀಡುವ ಸಾಸಿವೆ ಬೆಳೆಗೆ ಮಿತ ಪ್ರಮಾಣದ ನೀರು ಸಾಕಾಗುತ್ತದೆ. ಹಾಗಾಗಿ ನೀರಿನ ಅಭಾವ ವಿರುವ ಸಂದರ್ಭಗಳಲ್ಲೂ ರೈತರು ಈ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಸಾಸಿವೆ ಬೀಜ ಬಿತ್ತನೆಗೆ ಎಕರೆವೊಂದಕ್ಕೆ ೫ ಸಾವಿರ ರೂಪಾಯಿ ವೆಚ್ಚವಾದರೆ, ೧೫ ಸಾವಿರ ರೂಪಾಯಿವರೆಗೆ ಲಾಭ ಗಳಿಸಬಹುದಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲೂ ಸಾಸಿವೆ ಬೆಳೆಗೆ ಉತ್ತಮ ಬೇಡಿಕೆಯಿದೆ. ಅಲ್ಲದೇ, ಸಾಸಿವೆ ಬೆಳೆಯು ಜಾನುವಾರುಗಳಿಗೂ ಉತ್ತಮ ಮೇವಾಗಿದೆ.
ಈ ವರ್ಷ ಎರಡನೇ ಬೆಳೆಗೆ ನೀರಿನ ಸಮಸ್ಯೆ ಎದುರಾದ ಕಾರಣ ಪರ್ಯಾಯವಾಗಿ ಸಾಸಿವೆ ಕೃಷಿಯಲ್ಲಿ ತೊಡಗಿದ್ದು, ಬೆಳೆಗೆ ಕಡಿಮೆ ಗೊಬ್ಬರ ಹಾಗೂ ಮಿತ ಪ್ರಮಾಣದ ಕೀಟನಾಶಕ ಸಾಕಾಗುತ್ತದೆ ಎಂದಿದ್ದಾರೆ ಇಲ್ಲಿನ ರೈತ ಚಂದ್ರಶೇಖರ ರೆಡ್ಡಿ. ವರ್ಷದಲ್ಲಿ ಎರಡು ಬಾರಿ ಭತ್ತ ಬೆಳೆದರೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಈ ದಿಸೆಯಲ್ಲಿ ಪರ್ಯಾಯ ಬೆಳೆಯಾಗಿ ಸಾಸಿವೆ ಬೆಳೆಯುವುದರಿಂದ ಫಲವತ್ತತೆ ಕಾಪಾಡಿಕೊಳ್ಳಲು ನೆರವಾಗಲಿದೆ ಎನ್ನುತ್ತಾರೆ ಮತ್ತೋರ್ವ ರೈತ ರವಿಚಂದ್ರ.
ಕಂಪ್ಲಿ ತಾಲೂಕಿನ ರೈತ ಸಂಪರ್ಕ ಕೇಂದ್ರದ ಪ್ರಭಾರಿ ಕೃಷಿ ಅಧಿಕಾರಿ ಜ್ಯೋತಿ ಮಾಹಿತಿ ನೀಡಿ, ತಾಲೂಕಿನಲ್ಲಿ ಈ ಬಾರಿ ೨೫೦ ರಿಂದ ೩೫೦ ಹೆಕ್ಟೇರ್ ಪ್ರದೇಶದಲ್ಲಿ ಸಾಸಿವೆ ಬೆಳೆಯುತ್ತಿದ್ದಾರೆ. ಮಳೆಯ ಕೊರತೆ, ನೀರಿನ ಅಭಾವದಂತಹ ಪರಿಸ್ಥಿತಿಗಳಲ್ಲೂ ಸಾಸಿವೆ ಬೆಳೆದು ಉತ್ತಮ ಆದಾಯ ಗಳಿಸಬಹುದು ಎಂದು ಹೇಳಿದ್ದಾರೆ.
ರೈತ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ವಿದ್ಯಾವತಿ ಹೊಸಮನಿ, ಸಾಸಿವೆ ಕೃಷಿಯಲ್ಲಿ ಅತಿ ಕಡಿಮೆ ಖರ್ಚು ಮಾಡಿ ಹೆಚ್ಚಿನ ಆದಾಯ ಗಳಿಸಬಹುದು. ಎಣ್ಣೆ ಕಾಳುಗಳಿಗೆ ಬೇಡಿಕೆ ಇರುವುದರಿಂದ ಸಾಸಿವೆ ಕೃಷಿ ಕೈಗೊಂಡು ರೈತರು ಹೆಚ್ಚು ಲಾಭ ಪಡೆಯಬಹುದು ಎಂದಿದ್ದಾರೆ.
ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಮಲ್ಲೇಶ್, ಭತ್ತ ಕಟಾವು ಮಾಡುವ ೧೦ ದಿನ ಮುಂಚಿತವಾಗಿ ಸಾಸಿವೆ ಬೀಜ ಬಿತ್ತನೆ ಮಾಡಲಾಗತ್ತಿದ್ದು, ಭತ್ತದ ತೇವಾಂಶ ಸಾಸಿವೆ ಮೊಳಕೆ ಒಡೆಯಲು ಅನುಕೂಲಕರ ವಾತಾವರಣ ಕಲ್ಪಿಸಲಿದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಕೃಷಿ ವಲಯದಲ್ಲಿ ಎದುರಾಗುವ ಸಂಕಷ್ಟಗಳನ್ನು ಮೆಟ್ಟಿನಿಂತು ವಿನೂತನ ಪ್ರಯತ್ನಗಳ ಮೂಲಕ ಪರ್ಯಾಯ ಬೆಳೆಗಳನ್ನು ಬೆಳೆದು ಅನ್ನದಾತರು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿರುವುದು ನಿಜಕ್ಕೂ ಸ್ಪೂರ್ತಿದಾಯಕ.



