ಹೊಸದಿಗಂತ ವರದಿ, ದಾವಣಗೆರೆ :
ರೈತ ಸಹೋದರರಿಗೆ ಪ್ರಮಾಣಪತ್ರ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ಚನ್ನಗಿರಿ ತಾಲೂಕು ಸಂತೇಬೆನ್ನೂರು ಹೋಬಳಿ-೨ರ(ನಾಡ ಕಚೇರಿ, ದೇವರಹಳ್ಳಿ) ಮಹಿಳಾ ಉಪ ತಹಶೀಲ್ದಾರ್ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದ ಆರೋಪಿ. ಹಿರೇಗಂಗೂರು ಗ್ರಾಮದ ರೈತ ಸಹೋದರರಾದ ಎಸ್.ಆರ್.ಕುಮಾರ ಹಾಗೂ ಗಿರೀಶ ಇಬ್ಬರೂ ಉಪ ತಹಶೀಲ್ದಾರ್ ಕಚೇರಿಗೆ ಬೋನಾಪೈಡ್ ಪ್ರಮಾಣಪತ್ರಕ್ಕೆ ಆನ್ ಲೈನ್ ಮೂಲಕ 2024 ಸೆಪ್ಟಂಬರ್ 26ರಂದು ಅರ್ಜಿ ಸಲ್ಲಿಸಿದ್ದರು. ಎಲ್ಲಾ ದಾಖಲೆ ಸರಿ ಇದ್ದರೂ, ಗುರುತಿನ ಚೀಟಿ ನೀಡಿಲ್ಲವೆಂದು ಹಿಂಬರಹ ನೀಡಿ, ಅ.5ರಂದು ಅರ್ಜಿ ತಿರಸ್ಕರಿಸಲಾಗಿತ್ತು. ಅ.8ರಂದು ಎರಡನೇ ಸಲ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅ.10ರ ಸಂಜೆ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಬಳಿ ವಿಚಾರಿಸಿದಾಗ 2 ಸಾವಿರ ರೂ. ಕೊಟ್ಟರೆ, ಕೆಲಸ ಮಾಡಿಕೊಡುವುದಾಗಿ ಹೇಳಿದ್ದಾರೆ. ಮುಂಗಡವಾಗಿ 500 ರೂ. ಪಡೆದ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ, ಉಳಿದ 1,500 ರೂ.ಗಳನ್ನು ಕೆಲಸ ಮುಗಿದ ನಂತರ ಕೊಡುವಂತೆ ಹೇಳಿದ್ದರು.
ಲಂಚದ ಹಣ ಕೊಡಲು ಮನಸ್ಸಿಲ್ಲದ ಎಸ್.ಆರ್.ಕುಮಾರ ಅ.15ರಂದು ಉಪ ತಹಶೀಲ್ದಾರ್ ಸುಧಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಸಿಬ್ಬಂದಿ, ಬಾಕಿ ಲಂಚದ ಹಣ 1,500 ರೂ. ಪಡೆಯುತ್ತಿದ್ದ ವೇಳೆ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪರನ್ನು ಟ್ರ್ಯಾಪ್ ಮಾಡಿ ವಶಕ್ಕೆ ಪಡೆದಿದ್ದಾರೆ.