ಹೊಸದಿಗಂತ ವರದಿ ಬಾಗಲಕೋಟೆ:
ಶಾಲೆಯಲ್ಲಿ ನೀರು ಕಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಘಟನೆ ಭಾನುವಾರ ನಸುಕಿನ ಜಾವ ಜಿಲ್ಲೆಯ ಬೀಳಗಿ ತಾಲ್ಲೂಕಿನ ನಾಗರಾಳ ಗ್ರಾಮದ ರಾಧಾಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡದಿದೆ.
ನಾಗರಾಳ ಗ್ರಾಮದ ನಾಗಪ್ಪ ತೋಳಮಟ್ಟಿ (64) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾಧಾಕೃಷ್ಣ ಶಾಲೆಯ ಶಿಕ್ಷಕ ಧನರಾಜ ರಾಠೋಡ ಕೊಲೆ ಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ.
ರಾಧಾಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪ್ಯೂಯನ್ ಆಗಿ ಕೆಲಸ ಮಾಡುತ್ತಿದ್ದ ನಾಗಪ್ಪ ತೋಳಮಟ್ಟಿ ನೀರು ಕಾಯಿಸುವ ಸಂಬಂಧಿಸಿದಂತೆ ಶಾಲೆಯ ಶಿಕ್ಷಕ ಧನರಾಜ ರಾಠೋಡ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆಂದು ಪೋಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ನಾಗಪ್ಪ ಕೊಲೆಯಾಗಿದ್ದಾನೆ.
ಬೆಳಿಗ್ಗೆ ನೀರು ಕಾಯಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಧಾಕೃಷ್ಣ ಪೂರ್ವ ಪ್ರಾಥಮಿಕಶಾಲೆಯಲ್ಲಿ ನಾಗಪ್ಪ ತೋಳಮಟ್ಟಿಯನ್ನು ಧನರಾಜ ರಾಠೋಡ ಕೊಲೆ ಮಾಡಿದ್ದಾನೆಂದು ಸಿಪಿಐ ಬಸವರಾಜ ಹಳಬನ್ನವರ ತಿಳಿಸಿದ್ದಾರೆ. ಕೊಲೆ ಆರೋಪಿ ಮೇಲೆ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ ಎಂದು ತಿಳಿಸಿದ್ದಾರೆ.
ಬೀಳಗಿ ಪೊಲೀಸ್ ಠಾಣೆಯಲ್ಲಿ ಕೊಲೆಯಾದ ನಾಗಪ್ಪನ ಪತ್ನಿ ಪಾರ್ವತಿ ತೋಳಮಟ್ಟಿ ದೂರು ನೀಡಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಕೊಲೆಯಾದ ಘಟನೆ ತಿಳಿಯುತ್ತಿದ್ದಂತೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ, ಡಿವೈಎಸ್ಪಿ ಹಾಗೂ ಸಿಪಿಐ ಬಸವರಾಜ ಹಳಬನ್ನವರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕೊಲೆಯಾದ ನಾಗಪ್ಪನಿಗೆ ಮೂರು ಪುತ್ರರಿದ್ದು ಓರ್ವ ಪುತ್ರ ಮಿಲಟರಿಯಲ್ಲಿದ್ದು , ಓರ್ವ ಸೊಸೆ ಕೂಡ ಮಿಲಟರಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೊಲೆ ಮಾಡಿದ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಕೊಲೆಯಾದ ವ್ಯಕ್ತಿಗೆ ಪೊಲೀಸ್ ಇಲಾಖೆ ಹುಡುಕಾಟ ನಡೆಸಿದೆ.