ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎರಡು ತಿಂಗಳ ಹಿಂದಿನ ಜಗಳಕ್ಕೆ ಸೇಡು ತೀರಿಸಿಕೊಳ್ಳಲು 17 ವರ್ಷದ ಬಾಲಕನೊಬ್ಬ ತನ್ನ ಶಾಲೆಯ ಇನ್ನೊಬ್ಬ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ತಂದೆಯ ಪಿಸ್ತೂಲ್ ತೆಗೆದುಕೊಂಡು ಬಂದು ವಿದ್ಯಾರ್ಥಿಯೋರ್ವ ತನ್ನ ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪದ ಗುರುಗ್ರಾಮದಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ 17ವರ್ಷದ ಬಾಲಕನೋರ್ವ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲ್ ತಂದು ತನ್ನ ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿದ್ದಾನೆ. ಘಟನೆಯಲ್ಲಿ ಕ್ಲಾಸ್‌ಮೇಟ್‌ಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಬದುಕುಳಿದಿದ್ದಾನೆ. ಘಟನೆ ನಡೆದ ಕೆಲ ಗಂಟೆಗಳಲ್ಲಿ ಆರೋಪಿ ವಿದ್ಯಾರ್ಥಿ ಹಾಗೂ ಆತನ ಅಪ್ರಾಪ್ತ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಾಯಗೊಂಡಿರುವ ವಿದ್ಯಾರ್ಥಿಯು 11ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆತನ ತಾಯಿ ನೀಡಿರುವ ಹೇಳಿಕೆ ಪ್ರಕಾರ ಶುಕ್ರವಾರ ರಾತ್ರಿ ಆಕೆಯ ಮಗನಿಗೆ ಶಾಲಾ ಸ್ನೇಹಿತರೊಬ್ಬರಿಂದ ಕರೆ ಬಂದಿದ್ದು, ಭೇಟಿಯಾಗುವಂತೆ ಕೇಳಿದ್ದಾರೆ. ಇದಕ್ಕೆ ಆ ಯುವಕ ಮೊದಲು ಒಪ್ಪಲಿಲ್ಲ. ಸ್ನೇಹಿತನ ಬಲವಂತಕ್ಕೆ ಒಪ್ಪಿ ಖೇರ್ಕಿ ದೌಲಾ ಟೋಲ್ ಪ್ಲಾಜಾಗೆ ಹೋಗಿ, ಆರೋಪಿಯನ್ನು ಭೇಟಿಯಾಗಿದ್ದಾನೆ.
ಆರೋಪಿಯು ಈತನನ್ನು ಸೆಕ್ಟರ್ 48ರಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ. ಈ ವೇಳೆ ಆತನ ಜೊತೆ ಮತ್ತೊಬ್ಬ ಸ್ನೇಹಿತನೂ ಇರುತ್ತಾನೆ. ಆ ಮನೆಯಲ್ಲಿ ಆರೋಪಿಯು ತನ್ನ ಅಪ್ಪನ ಲೈಸೆನ್ಸ್ ಪಿಸ್ತೂಲ್ ಬಳಸಿ ಯುವಕನ ಮೇಲೆ ಫೈರಿಂಗ್ ಮಾಡಿದ್ದಾನೆ.
ಆರೋಪಿಯ ತಂದೆ ಒಬ್ಬ ಪ್ರಾಪರ್ಟಿ ಡೀಲರ್ ಆಗಿದ್ದಾರೆ. ಅವರ ಬಳಿ ಪರವಾನಿಗೆ ಹೊಂದಿರುವ ಪಿಸ್ತೂಲ್ ಇತ್ತು. ಮನೆಯಲ್ಲಿದ್ದ ಆ ಪಿಸ್ತೂಲ್ ಅನ್ನೇ ಬಳಸಿ ಆರೋಪಿಯು ತನ್ನ ಸಹಪಾಠಿಯ ಮೇಲೆ ದಾಳಿ ಮಾಡಿದ್ದಾನೆ.
ಪೊಲೀಸರ ಕಂಟ್ರೋಲ್ ರೂಮ್ಗೆ ಶುಕ್ರವಾರ ಮಧ್ಯರಾತ್ರಿ ಕರೆ ಬಂದಿದೆ. ಸಾದರ್ ಠಾಣೆಯ ಪೊಲೀಸರು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಗಾಯಾಳುವನ್ನು ಮೇದಾಂತ ಆಸ್ಪತ್ರೆಗೆ ಸಾಗಿಸಲಾಗಿತ್ತು. ಒಂದು ಪಿಸ್ತೂಲ್, ಒಂದು ಮ್ಯಾಗಜಿನ್, ಐದು ಲೈವ್ ಕಾರ್ಟ್ರಿಟ್ಜ್ಗಳನ್ನು ಘಟನೆಯ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ.

