April 15, 2026
Wednesday, April 15, 2026
spot_img

ಬಿಸಿಲ ಬೇಗೆಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ!

ಹೊಸ ದಿಗಂತ ವರದಿ, ಮಂಗಳೂರು:

ಸುಡುವ ಬಿರು ಬಿಸಿಲಿಗೆ ಮನುಷ್ಯರಲ್ಲದೆ ಮೂಕ ಪ್ರಾಣಿಗಳು ಸಹ ಬಾಯಾರಿಕೆಯಿಂದ ತತ್ತರಿಸುತ್ತಿವೆ. ಬೇಸಿಗೆಯ ಬಿಸಿಲ ಧಗೆಯನ್ನ ತಾಳಲಾರದೆ ಅತ್ತಿತ್ತ ಅಲೆದಾಡುತ್ತಿದ್ದ ಅಳಿಲಿಗೆ ನಗರದಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಸಿಬ್ಬಂದಿಯೋರ್ವರು ನೀರು ಕುಡಿಸಿದ್ದು, ದಣಿವಾರಿಸಿಕೊಂಡ ಅಳಿಲು ಪೊಲೀಸಪ್ಪನ ಜೊತೆ ಸ್ನೇಹ ಬೆಳೆಸಿರುವ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿ ರಮೇಶ್ ಅಸಂಗಿ ಎಂಬವರು ಭಾನುವಾರದಂದು ನಗರದ ಮಹಾಕಾಳಿ ಪಡ್ಪು ಎಂಬಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಅವರ ಬೈಕಿನ ಚಕ್ರದ ಮೇಲೆ ದಣಿವಿಂದ ಓಡಾಡುತ್ತಿದ್ದ ಅಳಿಲನ್ನ ಗಮನಿಸಿದ್ದಾರೆ. ತಕ್ಷಣ ತನ್ನ ನೀರಿನ ಬಾಟಲಿಯ ಮುಚ್ಚಲಕ್ಕೆ ನೀರು ಸುರಿದು ಅಳಿಲಿಗೆ ಕುಡಿಸಲು ಪ್ರಯತ್ನಿಸಿದ್ದಾರೆ. ಆರಂಭದಲ್ಲಿ ಅಳಿಲು ಹತ್ತಿರ ಬರಲು ನಿರಾಕರಿಸಿದ್ದು ಬಳಿಕ ರಮೇಶ್ ಅವರ ಕಾಳಜಿಗೆ ಮನಸೋತು ನೀರನ್ನು ಕುಡಿದು ದಣಿವು ನೀಗಿಸಿಕೊಂಡಿದೆ. ದಣಿವನ್ನ ನೀಗಿಸಿಕೊಂಡ ಅಳಿಲು ಮತ್ತೆಲ್ಲೂ ಹೋಗದೆ ರಮೇಶ್ ಅಸಂಗಿ ಅವರ ಜತೆಯಲ್ಲೇ ಬಂದಿದ್ದು,ಆ ಅಳಿಲನ್ನ ರಮೇಶ್ ಅವರು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಅಳಿಲಿಗೆ ನೀರುಣಿಸುವ ದೃಶ್ಯವನ್ನು ರಮೇಶ್ ಅವರು ತಮ್ಮ ಮೊಬೈಲಲ್ಲಿ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಬಿರು ಬಿಸಿಲಿಗೆ ಮೈಯೊಡ್ಡಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯು ಮೂಕ ಪ್ರಾಣಿಯ ಮೇಲೆ ತೋರಿದ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ, ಮನುಷ್ಯ ಮತ್ತು ಮೂಕ ಪ್ರಾಣಿಯ ನಡುವಿನ ನಿಷ್ಕಲ್ಮಶ ಪ್ರೀತಿಗೂ ಜನರು ಮನಸೋತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !