ವನ್ಯಜೀವಿಗಳ ಬೇಟೆಗೆ ಬಳಸೋ ನಾಡ ಬಂದೂಕು, ಸ್ಫೋಟಕ ವಸ್ತುಗಳು ವಶಕ್ಕೆ

ಹೊಸದಿಗಂತ ವರದಿ ತುಮಕೂರು :

ವನ್ಯಜೀವಿಗಳನ್ನು ಬೇಟೆಯಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ನಾಡ ಬಂದೂಕು ಸೇರಿದಂತೆ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಎಸಿಎಫ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಯಶಸ್ವಿಯಾಗಿದ್ದಾರೆ.

ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ಕಣಿವೆಪಾಳ್ಯ ಗ್ರಾಮದ ಸುರೇಶ್ ಎಂಬುವರ ಮನೆಯ ಮೇಲೆ ಅರಣ್ಯ ಇಲಾಖೆ ಎಸಿಎಫ್ ಪವಿತ್ರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಕಳೆದ ವಾರ ಚಿರತೆಯನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಮೇರೆಗೆ ಸುರೇಶ್ ಮನೆಯ ಮೇಲೆ ದಾಳಿ ಮಾಡಿದಾಗ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಒಂದು ನಾಡ ಬಂದೂಕು, ಸಿಡಿಮದ್ದುಗಳು, ಗುಂಡುಗಳು, ಸ್ಪೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರಂಭದಲ್ಲಿ ಸುರೇಶ್ ಮನೆಯವರು ಅರಣ್ಯಾಧಿಕಾರಿಗಳು ದಾಳಿ ಮಾಡಿದಾಗ ಸರ್ಚ್ ವಾರಂಟ್ ಇಲ್ಲದೆ ಒಳಗೆ ಬರಬೇಡಿ ಎಂದು ಅಡ್ಡಿಪಡಿಸಿದ್ದಾರೆ.

ನಂತರ ಪೊಲೀಸರ ಸಹಕಾರದೊಂದಿಗೆ ಶೋಧ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ಜೂನ್ 16ರಂದು ಹುಲಿಯೂರುದುರ್ಗ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಹುತ್ರಿದುರ್ಗ ಮೀಸಲು ಅರಣ್ಯ ಪ್ರದೇಶದ ವಡಘಟ್ಟ ಗ್ರಾಮದ ಸಮೀಪ 4 ವರ್ಷದ ಗಂಡು ಚಿರತೆಯನ್ನು ಕೆಲವು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಸಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಡಘಟ್ಟದ ನಾರಾಯಣ ಎಂಬುವರನ್ನು ಬಂಧಿಸಿದ್ದು ಮತ್ತೆ ಮೂರು ಮಂದಿ ತಲೆ ಮರಿಸಿ ಕೊಂಡಿದ್ದರು. ಮೂರು ಮಂದಿಯಲ್ಲಿ ಬುಧವಾರ ಬೆಳಗ್ಗೆ ಮತ್ತೊಬ್ಬ ಆರೋಪಿ ಕೃಷ್ಣಪ್ಪ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಮತ್ತೆ ಇಬ್ಬರನ್ನು ಶೀಘ್ರವೇ ವಶಕ್ಕೆ ಪಡೆಯಲಾಗುವುದು ಎಂದು ಜಗದೀಶ್ ತಿಳಿಸಿದ್ದಾರೆ.

ದಾಳಿಯ ವೇಳೆ ಕುಣಿಗಲ್ ಅರಣ್ಯ ಇಲಾಖೆ ವಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!