ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಮತ್ತು ರಾಜ್ಯಗಳ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆಯೊಡ್ಡಿ ಅನೇಕ ಮಂದಿ ಉದ್ಯೋಗಾರ್ಥಿಗಳಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚಿಸಿದ ಡಿವೈಎಫ್‌ಐ ಮಾಜಿ ನೇತಾರೆ, ಬಾಡೂರು ಶಾಲೆಯ ಅಧ್ಯಾಪಿಕೆ, ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27)ಯನ್ನು ಪೊಲೀಸರು ಬಂಸಿದ್ದು, ಬಳಿಕ ಆಕೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಯಿತು.
ನಂತರ ಸಚಿತಾ ರೈಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕೊಂಡೊಯ್ಯಲಾಯಿತು. ಆಕೆಯ ಜೊತೆಗೆ ನಾಲ್ಕು ತಿಂಗಳ ಹಸುಗೂಸು ಕೂಡಾ ಜೈಲಿನಲ್ಲಿ ಕಾಲ ಕಳೆಯಬೇಕಾಗಿ ಬಂದಿದೆ.
ಕಾಸರಗೋಡು ನ್ಯಾಯಾಲಯದಲ್ಲಿ ಹಾಜರಾಗಲು ಗುರುವಾರ ಸಂಜೆ ಆಗಮಿಸುತ್ತಿದ್ದಂತೆ ವಿದ್ಯಾನಗರದಲ್ಲಿ ಸಚಿತಾ ರೈಯನ್ನು ಡಿವೈಎಸ್‌ಪಿ ಸಿ.ಕೆ.ಸುನೀಲ್‌ಕುಮಾರ್ ನೇತೃತ್ವದ ವಿಶೇಷ ತನಿಖಾ ದಳವು ಸೆರೆಹಿಡಿದಿದೆ. ಬಳಿಕ ಕುಂಬಳೆ ಪೊಲೀಸರು ತಲುಪಿ ಸಚಿತಾ ರೈಯನ್ನು ಕುಂಬಳೆ ಠಾಣೆಗೆ ಕರೆದೊಯ್ದು ತನಿಖೆಗೊಳಪಡಿಸಿದರು. ನಂತರ ಪ್ರಕರಣದ ತನಿಖೆಯ ಹೊಣೆಗಾರಿಕೆಯುಳ್ಳ ಗ್ರೇಡ್ ಎಸ್‌ಐ ಗಣೇಶ್ ಆಕೆಯ ಬಂಧನವನ್ನು ದಾಖಲಿಸಿದರು.
ಹಲವರಿಂದ ಪಡೆದುಕೊಂಡ ಒಟ್ಟು 78 ಲಕ್ಷ ರೂಪಾಯಿಗಳನ್ನು ಕುಂಜಾರು ನಿವಾಸಿಯಾದ ಚಂದ್ರಶೇಖರ ಎಂಬ ವ್ಯಕ್ತಿಗೆ ಹಸ್ತಾಂತರಿಸಿರುವುದಾಗಿ ವಿಚಾರಣೆ ವೇಳೆ ಸಚಿತಾ ರೈ ಸೋಟಕ ಮಾಹಿತಿ ನೀಡಿದ್ದಾಳೆ. ಹಣ ನೀಡಿರುವುದರ ಪುರಾವೆಯಾಗಿ 78 ಲಕ್ಷ ರೂ.ಗಳ ಚೆಕ್ ತನ್ನ ಬಳಿಯಿದೆ ಎಂದು ಸಚಿತಾ ರೈ ಹೇಳಿದ್ದಾಳೆ.
ಕುಂಬಳೆ ಸಿಐ ಕೆ.ಪಿ.ವಿನೋದ್‌ಕುಮಾರ್‌ರ ನೇತೃತ್ವದಲ್ಲಿ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡ ಬಳಿಕ ರಾತ್ರಿ 11 ಗಂಟೆಯ ವೇಳೆಗೆ ಸಚಿತಾ ರೈಯನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ (ಪ್ರಥಮ)ರ ವಸತಿಯಲ್ಲಿ ಹಾಜರುಪಡಿಸಲಾಯಿತು.
ಈ ವೇಳೆ ಸಚಿತಾ ರೈಗೆ ನ್ಯಾಯಾಂಗ ಬಂಧನ ವಿಸಿ ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸುವಂತೆ ಮೆಜಿಸ್ಟ್ರೇಟ್ ಆದೇಶಿಸಿದರು. ಆದರೆ ಮಧ್ಯರಾತ್ರಿಯಾದ ಹಿನ್ನೆಲೆಯಲ್ಲಿ ಸಚಿತಾ ರೈಯನ್ನು ಕಾಞಂಗಾಡಿನಲ್ಲಿರುವ ಜಿಲ್ಲಾ ಜೈಲಿಗೆ ಕಳುಹಿಸಲಾಯಿತು. ಅಲ್ಲಿಂದ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆಕೆಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಯಿತು.
ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಸಚಿತಾ ರೈ ವಿರುದ್ಧ ಈಗಾಗಲೇ 13 ಕೇಸುಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.