ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಶಾಕಿಂಗ್ ಘಟನೆ ನಡೆದಿದ್ದು, ಮಲಗುವಾಗ ಪುರುಷನಾಗಿದ್ದ ವ್ಯಕ್ತಿ ನಿದ್ರೆಯಿಂದ ಎಚ್ಚರವಾಗುವಷ್ಟರಲ್ಲಿ ಮಹಿಳೆಯಾಗಿ ಬದಲಾಗಿದ್ದಾನೆ.
ಮುಜಾಹಿದ್ ಎಂಬ 20 ವರ್ಷದ ಯುವಕ ಇಂತಹ ಘೋರ ಕೃತ್ಯಕ್ಕೆ ಒಳಗಾದ ವ್ಯಕ್ತಿ.
ಈತನಿಗೆ ವ್ಯಕ್ತಿಯೊಬ್ಬ ಉತ್ತರ ಪ್ರದೇಶದ ಮುಜಾಫರ್ ನಗರದ ಸ್ಥಳೀಯ ವೈದ್ಯಕೀಯ ಕಾಲೇಜಿನ ವೈದ್ಯರೊಂದಿಗೆ ಸೇರಿಕೊಂಡು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮೋಸ ಮಾಡಿದ್ದಾನೆ. ಈ ಪ್ರಕರಣದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಭಯಾನಕ ಕೃತ್ಯದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಯೂನಿಯನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮುಜಾಹಿದ್ ಸಂಜಕ್ ಗ್ರಾಮದ ವ್ಯಕ್ತಿಯಾಗಿದ್ದ. ಓಂಪ್ರಕಾಶ್ ಎಂಬ ವ್ಯಕ್ತಿ ಮನ್ಸೂರ್ ಪುರದ ಬೇಗ್ರಾಜ್ಪುರ ವೈದ್ಯಕೀಯ ಕಾಲೇಜಿನ ವೈದ್ಯರಿಗೆ ಮುಜಾಹಿದ್ಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿದ್ದಾನೆ. ಆತನ ಮಾತು ಕೇಳಿ ವೈದ್ಯರು ಮುಜಾಹಿದ್ನ ಜನನಾಂಗವನ್ನು ತೆಗೆದುಹಾಕಿ ಬಲವಂತವಾಗಿ ಲಿಂಗ ಬದಲಾವಣೆ ಮಾಡಿದ್ದಾರೆ.
ಮುಜಾಹಿದ್ ಗೆ ವೈದ್ಯಕೀಯ ಸಮಸ್ಯೆ ಇದೆ. ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಕಳೆದ ಎರಡು ವರ್ಷಗಳಿಂದ ಓಂಪ್ರಕಾಶ್ ಕಿರುಕುಳ ನೀಡುತ್ತಿದ್ದನು. ತನ್ನನ್ನು ಆಸ್ಪತ್ರೆಗೆ ಕರೆತಂದು ನಂತರ ಅರವಳಿಕೆ ಇಂಜೆಕ್ಷನ್ ನೀಡಿ ಲಿಂಗ ಬದಲಾವಣೆಯ ಸರ್ಜರಿ ಮಾಡಿದ್ದಾರೆ ಎಂದು ಮುಜಾಹಿದ್ ಆರೋಪಿಸಿದ್ದಾನೆ. ಅಷ್ಟೇ ಅಲ್ಲದೇ ಇನ್ನು ಮುಂದೆ ತನ್ನ ಕುಟುಂಬದವರು ತನ್ನನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ತನ್ನ ಜೊತೆ ಇರುವಂತೆ , ತನ್ನನ್ನೇ ಮದುವೆಯಾಗುವಂತೆ ಓಂಪ್ರಕಾಶ್ ಬೆದರಿಕೆ ಹಾಕಿರುವುದಾಗಿ ಮುಜಾಹಿದ್ ತಿಳಿಸಿದ್ದಾನೆ.
ಈ ಬಗ್ಗೆ ರೈತ ಮುಖಂಡರು, ಕಿಸಾನ್ ಸಂಘದ ಕಾರ್ಯಕರ್ತರು ವೈದ್ಯಕೀಯ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ನಡೆಯುವ ಮಾನವ ಅಂಗಗಳ ಕಳ್ಳಸಾಗಾಣಿಕೆಯಂತಹ ದುಷ್ಕೃತ್ಯಗಳನ್ನು ನಿಲ್ಲಿಸಬೇಕು. ಅದಕ್ಕಾಗಿ ಓಂಪ್ರಕಾಶ್ ಮತ್ತು ವೈದ್ಯಕೀಯ ಕಾಲೇಜಿನ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಮುಜಾಹಿದ್ ಗೆ ಕನಿಷ್ಠ 2 ಕೋಟಿ ಪರಿಹಾರ ನೀಡಬೇಕೆಂದು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಈ ಬಗ್ಗೆ ಮುಜಾಹಿದ್ ಪೊಲೀಸರಿಗೆ ದೂರು ನೀಡಿದ ಕಾರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓಂಪ್ರಕಾಶ್ ನನ್ನು ಬಂಧಿಸಿದ್ದಾರೆ.