March 13, 2026
Friday, March 13, 2026
spot_img

ಕಾಲನ ರೂಪದಲ್ಲಿ ಬಂದ ಗೂಡ್ಸ್ ವಾಹನ: ಹುಟ್ಟುಹಬ್ಬದ ದಿನವೇ ಮಸಣ ಸೇರಿದ ಯುವಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನೊಬ್ಬ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಉತ್ತರದ ತೋಟದಗುಡ್ಡದಹಳ್ಳಿ ನಿವಾಸಿ ಪವನ್ (24) ಮೃತಪಟ್ಟ ದುರ್ದೈವಿ. ಮಂಗಳವಾರ ಸಂಜೆ ಸ್ನೇಹಿತರೊಂದಿಗೆ ತನ್ನ ಜನ್ಮದಿನವನ್ನು ಆಚರಿಸಿಕೊಂಡ ಪವನ್, ಸಂಜೆ 5:45ರ ಸುಮಾರಿಗೆ ಐವರಕಂಡಪುರ ರಸ್ತೆಯ ಮೂಲಕ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಪವನ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಅಶೋಕಾ ಲೈಲಾಂಡ್ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೈಕ್ ಸವಾರ ಹಾಗೂ ಗೂಡ್ಸ್ ವಾಹನ ಎರಡೂ ಅತೀ ವೇಗದಲ್ಲಿದ್ದವು ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಪವನ್ ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಂಭ್ರಮದಿಂದ ಮನೆಗೆ ಬರಬೇಕಿದ್ದ ಮಗ ಹೆಣವಾಗಿ ಮರಳಿದ್ದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಸೋಲದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !