ಹೊಸ ದಿಗಂತ ವರದಿ,ಯಾದಗಿರಿ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನ್ಮ ಶತಾಬ್ಧಿ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮ ಅತ್ಯಂತ ವೈಭವದಿಂದ ಜರುಗಿತು.
ಇಲ್ಲಿನ ನಗರಸಭೆ ಕಚೇರಿ ರಸ್ತೆಯಿಂದ ಆರಂಭಗೊಂಡ ಪಥಸಂಚಲನ ಹತ್ತಿಕುಣಿ ವೃತ್ತ, ಗಾಂಧಿ ವೃತ್ತ ಮಾರ್ಗವಾಗಿ ವೀರಶೈವ ಕಲ್ಯಾಣ ಮಂಟಪದ ಮೂಲಕ ಕನಕ ಸರ್ಕಲ್ ಗೆ ಸಾಗಿ ವನಕೇರಿ ಲೇಔಟ್ ನಲ್ಲಿ ಸಮಾವೇಶಗೊಂಡಿತು.
ರಾಷ್ಟ್ರಪ್ರೇಮದ ಧ್ಯೋತಕವಾಗಿರುವ ಸಂಘದ ನೂರನೇ ವರ್ಷಾಚರಣೆಯ ಪಥಸಂಚಲನವನ್ನು ಗಿರಿ ನಗರದ ಜನತೆ ಕಣ್ತುಂಬಿಕೊಂಡರು.
ಗಣವೇಷದಲ್ಲಿನ ಸಾವಿರಾರು ಯುವಕರು ಬ್ಯಾಂಡ್, ವಾದ್ಯಗಳ ಸದ್ದಿಗೆ ತಕ್ಕಂತೆ ಮುಂದಡಿ ಇಡುತ್ತಿದ್ದರು. ಆರು ವರ್ಷದ ಬಾಲಕರು ಪಥಸಂಚಲನದಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದ್ದು ತರುಣರು ಸಹ ನಾಚಿಸುವಂತಿತ್ತು. ಎಲ್ಲೆಡೆ ತಾಯಿ ಭಾರತಿಯ ಸ್ತುತಿ ನೆರೆದ ರಾಷ್ಟ್ರ ಭಕ್ತರ ಮನಸ್ಸಿನಲ್ಲಿ ಅಚ್ಚೊತ್ತಿತ್ತು.
ಶೃಂಗಾರಗೊಂಡ ಗಿರಿ ನಗರ
ಪಥ ಸಂಚಲದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ತಳಿರು, ತೋರಣಗಳಿಂದ ಶೃಂಗರಿಸಲಾಗಿತ್ತು. ಮುಖ್ಯ ರಸ್ತೆಗಳನ್ನು ಸೆಗಣಿಯಿಂದ ಶುಭ್ರವಾಗಿ ಸಾರಿಸಿ, ರಂಗೋಲಿ ಬಿಡಿಸಲಾಗಿತ್ತು. ಎಲ್ಲೆಡೆ ರಾಷ್ಟ್ರಭಕ್ತಿ ಮೇಳೈಸುತ್ತಿತ್ತು. ಇತ್ತ ಗಣವೇಷಧಾರಿಗಳು ಪರೇಡ್ ನಲ್ಲಿ ಬರುತ್ತಿದ್ದಂತೆ ಭಾರತ್ ಮಾತಾ ಕೀ ಜೈ ಎಂಬ ಉದ್ಘೋಷಗಳು ಮೊಳಗುದವು.
ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ
ಪಥ ಸಂಚಲದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಜಿಲ್ಲಾ ಎಸ್ಪಿ ಪೃಥ್ವಿಕ್ ಶಂಕರ್ ಅವರೇ ಖುದ್ದಾಗಿ ರಸ್ತೆಗಿಳಿದು ಭದ್ರತೆಯ ನಿಗಾ ವಹಿಸಿದ್ದರು. ಗಣವೇಣಧಾರಿಗಳು ಸಂಚರಿಸುವ ರಸ್ತೆ ಬಂದ್ ಮಾಡಲಾಗಿತ್ತು. ಸುಗಮ ಸಂಚಾರಕ್ಕೆ ಎಲ್ಲ ವ್ಯವಸ್ಥೆ ಪೊಲೀಸ್ ಇಲಾಖೆ ಕೈಗೊಳ್ಳಲಾಗಿತ್ತು.
ಗೋಧೂಳಿ ಸಮಯಕ್ಕೆ ಪುಷ್ಪ ವೃಷ್ಠಿ
ನಗರದ ಗಾಂಧಿ ವೃತ್ತ, ಚಕ್ಕರಕಟ್ಟಾ, ಹತ್ತಿಕುಣಿ ರಸ್ತೆ, ಮೂಕಾಂಬಿಕಾ ಶಾಲೆ, ವೀರಶೈವ ಕಲ್ಯಾಣ ಮಂಟಪದ ಮೂಲಕ ಆಗಮಿಸಿದ ಪಥ ಸಂಚಲನದಲ್ಲಿನ ಗಣವೇಷಧಾರಿಗಳ ಮೇಲೆ ಸಾರ್ವಜನಿಕಕರು ಪುಷ್ಪ ವೃಷ್ಠಿ ಹರಿಸಿದರು. ರಸ್ತೆಗಳ ಇಕ್ಕೆಲಗಳಲ್ಲಿ ಗೋಧೂಳಿ ಸಮಯದಲ್ಲಿ ನಿಂತ ಸಾರ್ವಜನಿಕರಲ್ಲಿ ರಾಷ್ಟ್ರಪ್ರೇಮ ತುಂಬಿ ತುಳುಕುತ್ತಿತ್ತು. ರಸ್ತೆಗಳ ಮಧ್ಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್, ಭಾರತಾಂಬೆ, ಅಯೋಧ್ಯೆಯ ಶ್ರೀರಾಮಚಂದ್ರ ಮೂರ್ತಿಯ ಪ್ರತಿರೂಪಗಳ ಪುತ್ಥಳಿ ಇರಿಸಲಾಗಿತ್ತು.ಒಟ್ಟರೆ ಇಡೀ ನಗರ ಭಾಗವಾಧ್ವಜಗಳಿಂದ ಕೇಸರಿಮಯವಾಗಿತ್ತು.