ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾರ್ಬಡೋಸ್ನಿಂದ ಹೊರಟಿರುವ ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ನಾಳೆ (ಜುಲೈ 04) ದೆಹಲಿಗೆ ಬಂದಿಳಿಯಲಿದೆ. ಇತ್ತ ಮುಂಬೈನಲ್ಲಿ ವಿಜಯೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ.
ಗುರುವಾರ ಸಂಜೆ 5ರ ಸುಮಾರಿಗೆ ಭಾರತ ತಂಡವನ್ನು ತೆರೆದ ಬಸ್ನಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್‌ನಿಂದ ಮೆರವಣಿಗೆ ಮೂಲಕ ತೆರೆದ ಬಸ್ನಲ್ಲಿ ವಾಂಖೆಡೆ ಸ್ಟೇಡಿಯಂಗೆ ಕರೆತರಲಾಗುತ್ತದೆ.
ಈ ರೋಡ್ ಶೋನಲ್ಲಿ ಭಾರತ ತಂಡದ ಎಲ್ಲಾ ಆಟಗಾರರು ವಿಶ್ವಕಪ್ನೊಂದಿಗೆ ತೆರೆದ ಬಸ್ನಲ್ಲಿ ಅಭಿಮಾನಿಗಳತ್ತ ಕೈಬೀಸುತ್ತ ವಾಂಖೆಡೆ ಕ್ರೀಡಾಂಗಣಕ್ಕೆ ಬಂದು ವಿಜಯೋತ್ಸವ ಆಚರಿಸಲಿದ್ದಾರೆ. ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಘೋಷಣೆ ಮಾಡಿದ್ದ 125 ಕೋಟಿ ರೂಪಾಯಿ ಬಹುಮಾನವನ್ನು ತಂಡಕ್ಕೆ ನೀಡಲಿದ್ದಾರೆ.
ಈ ವಿಜಯೋತ್ಸವದ ಘಳಿಗೆಯನ್ನು ಕಣ್ತುಂಬಿಕೊಳ್ಳಲು, ಟೀಂ ಇಂಡಿಯಾ ಜೊತೆ ಸಂಭ್ರಮಾಚರಣೆ ಮಾಡಲು ಫ್ಯಾನ್ಸ್ಗೂ ಸಹ ಅವಕಾಶ ನೀಡಲಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕ್ರಿಕೆಟ್ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಂಭ್ರಮ ಮನೆ ಮಾಡಿದೆ.
ಟಿ 20 ವಿಶ್ವಕಪ್ ಫೈನಲ್ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು. ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿ ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿತ್ತು. ಜತೆಗೆ ವಿಮಾನ ನಿಲ್ದಾಣಗಳು ಬಂದ್ ಆಗಿತ್ತು. ಹೀಗಾಗಿ ಭಾರತ ತಂಡ ಬಾರ್ಬಡೋಸ್ನ ಹೊಟೇಲ್‌ನಲ್ಲಿ ತಂಗಿತ್ತು. ಇದೀಗ ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಭಾರತಕ್ಕೆ ಮರಳಲಿದೆ.