ಹೊಸದಿಗಂತ ವರದಿ ಬನವಾಸಿ:
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಂಗಳವಾರ ಮುಂಜಾನೆ ಬೃಹತ್ ಆಲದ ಮರವೊಂದು ನವಲಗುಂದ-ಬನವಾಸಿ- ಮೊಗವಳ್ಳಿ ರಾಜ್ಯ ಹೆದ್ದಾರಿಗೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಸೋಮವಾರದಂದು ಸುರಿದ ಭಾರಿ ಮಳೆಗೆ ರಾತ್ರಿ ಬನವಾಸಿಯ ಅರಣ್ಯ ಇಲಾಖೆಯ ಸಮೀಪದಲ್ಲಿ ಹಳೆಯದಾದ ಬೃಹತ್ ಪ್ರಮಾಣದ ಆಲದ ಮರ ಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಯಿತು. ಮರಬಿದ್ದ ಪರಿಣಾಮ ಪೊಲೀಸ್ ಇಲಾಖೆ ಬದಲಿ ಮಾರ್ಗ ಕಲ್ಪಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿದ್ದು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯಿಂದ ಮರ ತೆರವು ಕಾರ್ಯಚರಣೆ ಮಾಡಲಾಗುತ್ತಿದೆ. ತೀವ್ರ ಮಳೆಯಿಂದಾಗಿ ಹಲವೆಡೆ ಮರಬಿದ್ದು ವಿದ್ಯುತ್ ಕಂಬ, ತಂತಿಗಳಿಗೂ ಹಾನಿ ಉಂಟಾಗಿ ವಿದ್ಯುತ್ ವ್ಯತ್ಯಯುಂಟಾಗಿದೆ.