ಹೊಸದಿಗಂತ ಕಲಬುರಗಿ
ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ,ಮಹಾ ದಾಸೋಹಿ ಡಾ.ಶರಣಬಸವಪ್ಪ ಅಪ್ಪ ಅವರು ಗುರುವಾರ ರಾತ್ರಿ 9.23ಕ್ಕೆ ಲಿಂಗೈಕ್ಯರಾಗಿದ್ದು, ಶುಕ್ರವಾರ ಬೆಳಿಗ್ಗೆಯಿಂದಲೇ ಅಪ್ಪಾಜಿಯವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದೆ.
ಕಳೆದ ಹಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಹಾಗೂ ವಯೋಸಹಜದಿಂದ ಬಳಲುತ್ತಿದ್ದರು, ಶುಕ್ರವಾರ ಸಂಜೆ 7.30ರ ಸುಮಾರಿಗೆ ಸಂಸ್ಥಾನದ ಮಹಾದಾಸೋಹ ಮನೆಗೆ ಕರೆದುಕೊಂಡು ಬಂದಾಗ ಅವರು ತಮ್ಮ ಕೊನೆಯುಸಿರೆಳೆದರು.
ಇಂದು ಸಂಜೆ ಶರಣಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ದಿ.ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಸಮಾಧಿಯ ಪಕ್ಕದಲ್ಲಿ ಸಂಜೆ ೫ ಗಂಟೆಗೆ ವೀರಶೈವ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ, ಅಂತ್ಯಕ್ರಿಯೆ ಜರುಗಲಿದೆ ಎಂದು ಸಂಸ್ಥಾನದ ಮೂಲಗಳು ತಿಳಿಸಿವೆ.
ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.
ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾ ಗುರುವಾರ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ, ರಾಜ್ಯ ಸರಕಾರ ತೀವ್ರ ಸಂತಾಪ ಸೂಚಿಸಿದ್ದು,ಮೃತರ ಗೌರವಾರ್ಥ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಅಧಿನ ಕಾರ್ಯದರ್ಶಿಗಳು ತಿಳಿಸಿದ್ದಾರೆ.