ಹೊಸ ದಿಗಂತ ವರದಿ,ಪಡುಬಿದ್ರಿ:
ಹೆಜಮಾಡಿಯ ಕಡಲ ಕಿನಾರೆಗೆ ಬಂದು ದಡ ಸೇರಿದ ರಾಶಿ ರಾಶಿ ಬೂತಾಯಿ ಮೀನುಗಳಿಂದಾಗಿ ಸ್ಥಳೀಯರಿಗೆ ಮೀನಿನ ಸುಗ್ಗಿ ಸಂಭ್ರಮವಾಗಿತ್ತು.
ಕೆಲ ಮಂದಿ ಗೋಣಿ ಚೀಲಗಳಲ್ಲಿ ತುಂಬಿಸಿಕೊಂಡು ಮೀನು ಕೊಂಡೊಯ್ದರೆ ಕೆಲ ಮಂದಿ ಸ್ಥಳೀಯವಾಗಿಯೇ ಮೀನು ಪ್ರಿಯರಿಗೆ ವ್ಯಾಪಾರ ಮಾಡಿ ಹಣವನ್ನು ಜೇಬಿಗಿಳಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೆಜಮಾಡಿ ಅಮಾವಾಸ್ಯೆ ಕರಿಯ ಪ್ರದೇಶದ ಕಡಲಿನಲ್ಲಿ ತೇಲಿ ಬಂದ ಟನ್ ಗಟ್ಟಲೆ ಬೂತಾಯಿ ಮೀನು ರಾಶಿಯು ಮೀನು ಪ್ರಿಯರಿಗೆ ಸಂಭ್ರಮ – ಸಡಗರವನ್ನು ನೀಡಿದೆ.
ಸೋಮವಾರ ಹೆಜಮಾಡಿ ಅಮಾವಾಸ್ಯೆಕರಿಯ ಭಾಗದಲ್ಲಿನ ಕಡಲಿನಲ್ಲಿ ಎರ್ಮಾಳು ತೆಂಕದ ವೀರಾಂಜನೇಯ ಕೈರಂಪಣಿ ಫಂಡ್ ಇದರ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರು.
ಇವರು ಮೀನು ಹಿಡಿಯಲು ಬೀಸಿದ್ದ ಬಲೆಗೆ ಬಂಪರ್ ಮೀನು ಲಭಿಸಿದ್ದು, ಸುಮಾರು ೩೦ ಟನ್ ಗೂ ಅಧಿಕ ಮೀನು ಬಿದ್ದಿರುತ್ತದೆ.ಬಲೆಯನ್ನು ದಡಕ್ಕೆ ಎಳೆಯುವ ವೇಳೆಯಲ್ಲಿ ಅಧಿಕ ಸಂಖ್ಯೆಯ ಭೂತಾಯಿ ಮೀನು ಬಲೆಯನ್ನು ಹೊರತು ಪಡಿಸಿ ಸಮುದ್ರದ ಅಲೆಗಳ ಹೊಡೆತಕ್ಕೆ ಹೆಚ್ಚುವರಿಯಾಗಿ ದಡವನ್ನು ಸೇರಿತ್ತು. ಹಾಗಾಗಿ ಈ ವಿಷಯ ತಿಳಿಯುತ್ತಿದ್ದಂತೆಯೇ ಜಮಾಯಿಸಿದ ಸಾವಿರಾರು ಸಂಖ್ಯೆಯಲ್ಲಿ ಮೀನು ಪ್ರಿಯರು ಕತ್ತಲಾದುದನ್ನೂ ಪರಿಗಣಿಸದೆ ಮೀನು ಹೊತ್ತೊಯ್ಯುವಲ್ಲಿ ನಿರತರಾಗಿದ್ದರು.
ಕೆಲ ಮನೆಗಳಲ್ಲಿ ಭರ್ಜರಿ ಬಾಡೂಟ. ಕೆಲವರು ಇಲ್ಲೇ ಮೀನಿನ ವ್ಯಾಪಾರ. ಕೆಲವರು ಫಿಶ್ ಮೀಲ್‌ಗಳಿಗೆ ಮೀನುಗಳನ್ನು ರವಾನಿಸಿ ವ್ಯಾಪಾರ ಕುದುರಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿಯೂ ಭರ್ಜರಿ ವ್ಯಾಪಾರ ನಡೆಯುತ್ತಿದೆ.


