ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ತೀವ್ರ ಗಾಯದ ನಡುವೆಯೂ ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಪಂತ್‌ಗೆ ಮೊದಲ ದಿನದ ಆಟದಲ್ಲಿಯೇ ಗಂಭೀರ ಗಾಯವಾಯಿತು. ಕ್ರಿಸ್ ವೋಕ್ಸ್ ಬೌಲಿಂಗ್ ವೇಳೆ ರಿವರ್ಸ್ ಸ್ವೀಪ್ ಪ್ರಯತ್ನಿಸಿದಾಗ ಚೆಂಡು ನೇರವಾಗಿ ಪಂತ್ ಅವರ ಬಲಗಾಲಿಗೆ ಬಡಿದ ಪರಿಣಾಮ, ಗಾಯವಾಗಿ ರಕ್ತಸ್ರಾವವಾಯಿತು. ಮೂಳೆ ಮುರಿತವೂ ಸಂಭವಿಸಿದ್ದ ಬಗ್ಗೆ ವರದಿಗಳೂ ಹರಿದಾಡಿದವು.
ಆಗ ತಕ್ಷಣವೇ ಅವರನ್ನು ಗಾಲ್ಫ್ ಕಾರ್ಟ್ ಆಂಬ್ಯುಲೆನ್ಸ್ ಮೂಲಕ ಮೈದಾನದಿಂದ ಹೊರಕರೆದೊಯ್ಯಲಾಯಿತು. ಹಲವರು ಪಂತ್ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲವೆಂದು ಅಂದಿದ್ದರು. ಆದರೆ ಅವರ ಮನೋಬಲ ಹಾಗೂ ದೇಶಪ್ರೀತಿಯ ಮುಂದೆ ನೋವು ಕೂಡ ಕಡಿಮೆ ಎನಿಸಿತು. ತೀವ್ರ ನೋವನ್ನು ಸಹಿಸಿಕೊಂಡು ಪಂತ್ ಮರುಬಾರಿಗೆ ಬ್ಯಾಟಿಂಗ್‌ಗೆ ಬಂದಾಗ, ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಕೂಡ ಆಶ್ಚರ್ಯಚಕಿತರಾದರು.
ಬಲಗಾಲು ನೊವುತ್ತಿದ್ದರೂ ಪಂತ್ ಒಂದು ಕಾಲಿನಿಂದ ಬ್ಯಾಟ್ ಬೀಸುತ್ತ, ಜೋಫ್ರಾ ಆರ್ಚರ್ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿದರು. ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಅರೆಶತಕ ಪೂರೈಸಿದರು. ಓಡೋ ಸಮರ್ಥತೆ ಇಲ್ಲದ ಕಾರಣ, ಅವರು ಕೇವಲ ಬೌಂಡರಿ ಹೊಡೆಯುವ ತಂತ್ರಕ್ಕೆ ಶರಣಾದರು.
ಗಂಭೀರವಾಗಿ ಗಾಯಗೊಂಡಿರುವ ರಿಷಭ್ ಪಂತ್‌ಗೆ ಕನಿಷ್ಠ ರನ್ನರ್ ಏಕೆ ನೀಡಲಿಲ್ಲ ಎಂದು ಕೆಲವು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ. ಆದರೆ ಐಸಿಸಿ 2011ರ ಅಕ್ಟೋಬರ್ 1ರಿಂದ ‘ರನ್ನರ್’ ನಿಯಮವನ್ನು ರದ್ದುಗೊಳಿಸಿದೆ. ಕೆಲ ಆಟಗಾರರು ಈ ನಿಯಮದ ದುರುಪಯೋಗ ಮಾಡಿಕೊಂಡ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಪಂತ್ ಪ್ರಕರಣದ ನಂತರ ಮತ್ತೆ ಈ ನಿಯಮ ಮರುಪರಿಶೀಲನೆಗೊಳಪಡಬೇಕೆಂಬ ಆಗ್ರಹಗಳು ಕೇಳಿ ಬರುತ್ತಿವೆ.