ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ನಡೆದ ಸಾಹಸಮಯ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪಹರ್‌ಪುರ ಪ್ರದೇಶದ ಹಳ್ಳಿಯೊಂದರಲ್ಲಿ ಮೇಕೆ ಮರಿ ಅಚಾನಕ್ 40 ಅಡಿ ಆಳದ ತೆರೆದ ಬಾವಿಗೆ ಬಿದ್ದಿತ್ತು. ಅದರ ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ ಅದನ್ನು ಮೇಲೆತ್ತೋದು ಅಷ್ಟೊಂದು ಸುಲಭವಾಗಿರಲಿಲ್ಲ.
ಹಗ್ಗ ಹಾಗೂ ತಾತ್ಕಾಲಿಕ ಉಪಕರಣಗಳಿಂದ ಮೇಕೆಯನ್ನು ಮೇಲಕ್ಕೆತ್ತಲು ಹಲವು ಪ್ರಯತ್ನಗಳು ನಡೆದರೂ ಫಲ ನೀಡಲಿಲ್ಲ. ಇದೇ ವೇಳೆ, ಎಲ್ಲರನ್ನೂ ಅಚ್ಚರಿಗೊಳಿಸುವಂತೆ ಒಬ್ಬ ಪುಟ್ಟ ಬಾಲಕ ಸ್ವಯಂಪ್ರೇರಿತನಾಗಿ ಮುಂದೆ ಬಂದು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮೇಕೆ ಮರಿಯನ್ನು ಉಳಿಸುವುದಾಗಿ ಹೇಳಿದ ಬಾಲಕನ ಸೊಂಟಕ್ಕೆ ಹಗ್ಗ ಬಿಗಿದು, ಗ್ರಾಮಸ್ಥರು ಅವನನ್ನು ಎಚ್ಚರಿಕೆಯಿಂದ ಬಾವಿಯೊಳಗೆ ಇಳಿಸಿದರು.
ಇದನ್ನೂ ಓದಿ:
ಸ್ಥಳದಲ್ಲಿದ್ದವರು ಆತಂಕದಿಂದ ದೃಶ್ಯ ವೀಕ್ಷಿಸುತ್ತಿದ್ದರೆ, ಬಾಲಕ ಬಾವಿಯೊಳಗೆ ಮೇಕೆಯನ್ನು ತಲುಪಿ ಸುರಕ್ಷಿತವಾಗಿ ಹಿಡಿದನು. ನಂತರ ಗ್ರಾಮಸ್ಥರು ನಿಧಾನವಾಗಿ ಇಬ್ಬರನ್ನೂ ಮೇಲಕ್ಕೆ ಎಳೆದರು. ಭಾಗ್ಯವಶಾತ್, ಯಾವುದೇ ಅಪಘಾತವಾಗದೆ ರಕ್ಷಣಾ ಕಾರ್ಯ ಯಶಸ್ವಿಯಾಯಿತು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಾಲಕನ ಧೈರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. “ನಿಜವಾದ ಹೀರೋ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.



