ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡೂವರೆ ತಿಂಗಳ ನಾಯಿ ಮರಿಯ ಮೇಲೆ 20 ವರ್ಷದ ಯುವಕನೊಬ್ಬ ಲೈಂಗಿಕ ದೌರ್ಜನೆ ಎಸಗಿದ್ದಲ್ಲದೇ ಅದನ್ನು ಕ್ರೂರವಾಗಿ ಥಳಿಸಿರುವ ಅಮಾನುಷ ಘಟನೆ ಮಹಾರಾಷ್ಟ್ರದ ಮುಂಬೈಯ ಮಲಾಡ್ ಪೂರ್ವದ ಕುರಾರ್ ಗ್ರಾಮದಲ್ಲಿ ನಡೆದಿದೆ.
ಪೊಲೀಸರು ನಾಯಿ ಮರಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪ್ರಾಣಿ ಕಲ್ಯಾಣ ಸಂಸ್ಥೆ ಪಿಎಎಲ್ ಫೌಂಡೇಶನ್ ಘಟನೆಯ ವಿಡಿಯೊವನ್ನು ಹಂಚಿಕೊಂಡಿದೆ. ಮುಂಬೈ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಪ್ರಾಣಿ ಪ್ರಿಯರು ಆ ಪ್ರದೇಶದ ಸಾರ್ವಜನಿಕ ಶೌಚಾಲಯಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದ್ದು, ಆರೋಪಿಯು ಘಟನಾ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾನೆ. ಆರಂಭದಲ್ಲಿ ಆ ಯುವಕ ಬಾಗಿಲು ತೆರೆಯಲು ನಿರಾಕರಿಸಿದ್ದಾನೆ. ಬಳಿಕ ಪೊಲೀಸರು ಬಲವಂತವಾಗಿ ಒಳಗೆ ಪ್ರವೇಶಿಸಿದ್ದು, ಅಲ್ಲಿ ಆರೋಪಿಯು ಅರೆಬೆತ್ತಲೆಯಾಗಿ, ಕೇವಲ ಶಾರ್ಟ್ಸ್ ಧರಿಸಿ ನಿಂತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆಕ್ರೋಶ ಭರಿತರಾಗಿ ನಿಂತಿದ್ದ ಸಾರ್ವಜನಿಕರ ಮಧ್ಯದಿಂದಲ್ಲೆ ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಪುಟ್ಟ ನಾಯಿ ಮರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.


