ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಬುದ್ದ ನಗರದ ಸರ್ಕಲ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಘಟನೆ ವಿವರ : ಕೊಲೆ ಆರೋಪಿ ಸಾಧಿಕ್‌ವುಲ್ಲಾ. ಈತ ನಗರದ ಜೋಗಿಮಟ್ಟಿ ರಸ್ತೆಯ ೧ನೇ ಕ್ರಾಸ್ ನಿವಾಸಿ. ಈತ ಶಬಾನಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಶಬಾನಾಳನ್ನು ತನ್ನೊಂದಿಗೆ ಸಂಸಾರ ಮಾಡಲು ಆಕೆಯ ತವರುಮನೆಯವರು ಹಾಗೂ ಆಕೆಯ ಮಾವ ತಾಜ್‌ಪೀರ್ ಬಿಡುತ್ತಿಲ್ಲ ಎಂದು ಆರೋಪಿ ದೂರಿದ್ದಾನೆ.
ಈ ಸಂಬಂಧ ಭಾನುವಾರ ರಾತ್ರಿ ೮.೪೫ ರ ಸುಮಾರಿಗೆ ಶಬಾನಾ ಅವರ ಮಾವ ತಾಜ್‌ಪೀರ್ ಅವರಿಗೆ ಆರೋಪಿ ಸಾಧಿಕ್‌ವುಲ್ಲಾ ಫೋನ್ ಮಾಡಿ ಬುದ್ದ ನಗರ ಸರ್ಕಲ್‌ಗೆ ಕರೆಸಿಕೊಂಡಿದ್ದಾನೆ. ಅಲ್ಲಿಗೆ ಬಂದ ತಾಜ್‌ಪೀರ್ ಅವರೊಂದಿಗೆ ಜಗಳ ತೆಗೆದ ಆರೋಪಿ ಮಚ್ಚಿನಿಂದ ತಾಜ್‌ಪೀರ್ ಅವರ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.



