Sunday, January 11, 2026

ಕಂಪ್ಲೆಂಟ್‌ ಮಾಡೋಕೆ ಕಮಿಷನರ್‌ ಕಚೇರಿಗೆ ಬಂದು ಬೈಕ್‌ ಎಗರಿಸಿದ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೊಲೀಸ್ ಆಯುಕ್ತ ಕಚೇರಿಗೆ ದೂರು ನೀಡಲು ಬಂದ ವ್ಯಕ್ತಿಯೋರ್ವ, ಅಲ್ಲೇ ಇದ್ದ ಬೈಕ್​ಅನ್ನು ಕದ್ದೊಯ್ದಿರುವ ಘಟನೆ ತಿರುವನಂರಪುರಂ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ನಡೆದಿದೆ. ಆರೋಪಿಯನ್ನು ಅಮಲ್​ ಸುರೇಶ್​ ಎಂದು ಗುರುತಿಸಲಾಗಿದೆ.

ಗುರುವಾರ ಪೊಲೀಸ್​ ಅಧಿಕಾರಿಯೊಬ್ಬರು ಡ್ಯೂಟಿಗೆ ರಿಪೋರ್ಟ್​ ಮಾಡಿಕೊಳ್ಳಲು ಆಯುಕ್ತರ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ 1ರ ಸುಮಾರಿಗೆ ಕಚೇರಿಗೆ ಹೋಗುವ ಭರದಲ್ಲಿ ಕೀಯನ್ನು ಬೈಕ್​ನಲ್ಲೇ ಬಿಟ್ಟು ಒಳ ಹೋಗಿದ್ದರು. ಜೊತೆಗೆ ಬೈಕ್​ನಲ್ಲೇ ಬ್ಯಾಗ್ ಬಿಟ್ಟಿದ್ದರು. ಈ ಸಂದರ್ಭದಲ್ಲಿ ದೂರು ನೀಡಲು ಬಂದಿದ್ದ ಆರೋಪಿಯು ಬೈಕ್​ನಲ್ಲೇ ಕೀ ಇರುವುದನ್ನು ನೋಡಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿ​​ ತನ್ನ ಕೆಲಸ ಮುಗಿದ ಬಳಿಕ ಮಧ್ಯಾಹ್ನ 3ಕ್ಕೆ ಬಂದು ಬೈಕ್​ ಹುಡುಕಾಡಿದಾಗ ಬೈಕ್​ ಅಲ್ಲಿರಲಿಲ್ಲ. ತಕ್ಷಣಕ್ಕೆ ಅವರು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆರೋಪಿ ಸುರೇಶ್​ ಕದೊಯ್ದಿರುವುದು ಗೊತ್ತಾಗಿದೆ.

ಅಧಿಕಾರಿ ದೂರಿನ ಮೇರೆಗೆ ಕಂಟೋನ್ಮೆಂಟ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 303(2) ರ ಅಡಿಯಲ್ಲಿ ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದಾರೆ.

ಆರೋಪಿ ಸುರೇಶ್​, ಕಳ್ಳತನ ಪ್ರಕರಣದ ಇತಿಹಾಸ ಹೊಂದಿದ್ದಾನೆ. ಈತ ತನ್ನ ತಂದೆ ವಿರುದ್ಧ ದೂರು ದಾಖಲಿಸಲು ಕಮಿಷನರ್​​ ಕಚೇರಿಗೆ ಆಗಮಿಸಿದ್ದ. ಈ ವೇಳೆ ಕಚೇರಿಯಿಂದ ಹೊರಡುವಾಗ ಈ ಕಳ್ಳತನ ಮಾಡಿದ್ದಾನೆ. ಅದೇ ದಿನ ರಾತ್ರಿ ಮನವೀಯಂ ವಾದಿ ಬಳಿ ಆತನನ್ನು ಬಂಧಿಸಲಾಗಿದ್ದು. ವಾಹನ ಜಪ್ತಿ ಮಾಡಲಾಗಿದೆ.

ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸಿದಾಗ, ಪೊಲೀಸ್ ಅಧಿಕಾರಿಗಳು ತಾನು ನೀಡಿದ ದೂರನ್ನು ಸ್ವೀಕರಿಸಲಿಲ್ಲ. ಇದರಿಂದಾಗಿ ಮೋಟಾರ್ ಬೈಕ್​ ಕದಿಯಲು ನಿರ್ಧರಿಸಿದೆ ಎಂದು ತಿಳಿಸಿದ್ದಾನೆ. ಆರೋಪಿಯನ್ನು ವಿಚಾರಣೆಯ ಭಾಗವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!