ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಬಳ ಕೇಳಿದಕ್ಕೆ ಹೋಟೆಲ್ ನೌಕರನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಸೋಮಲಾಪುರದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಸತೀಶ್ ಹಲ್ಲೆಗೊಳಗಾದ ವ್ಯಕ್ತಿ.
ಬೆಂಗಳೂರಿನ ಕೊಪ್ಪ ನಿವಾಸಿ ಮಂಜು ಎಂಬುವವರ ಒಡೆತನದ ಹೋಟೆಲ್ ನಲ್ಲಿ ಸತೀಶ್ ಕೆಲಸ ಮಾಡುತ್ತಿದ್ದರು. ಸಂಬಳದ ಗಲಾಟೆಯಿಂದ ಸತೀಶ್ ಕೆಲಸ ಬಿಟ್ಟು ಊರಿಗೆ ವಾಪಸಾಗಿದ್ದರು. ಅಷ್ಟರಲ್ಲಿ ಹೋಟೆಲ್ ಮಾಲೀಕ ಮಂಜುಗೆ ಕರೆ ಮಾಡಿ ದುಡಿದ ಹಣದ ಬಗ್ಗೆ ಸತೀಶ್ ವಿಚಾರಿಸಿದ್ದಾರೆ.
ಇದರಿಂದ ಕೋಪಗೊಂಡ ಮಂಜು ಅವರ ಸಹೋದರ ಹಾಗೂ ಆತನ ನಾಲ್ಕೈದು ಮಂದಿ ಸ್ನೇಹಿತರು ಸತೀಶ್ ಗೆ ಕರೆ ಮಾಡಿ ಹಣ ನೀಡುವುದಾಗಿ ಹೇಳಿದ್ದರು. ನಂತರ ಅವರು ಅವನನ್ನು ರೆಸ್ಟೋರೆಂಟ್‌ಗೆ ಕರೆದೊಯ್ದು ಅವನಿಗೆ ಬೇಕಾದಷ್ಟು ಕುಡಿಸಿದ್ದಾರೆ. ಹಣ ಕೊಡುತ್ತೇನೆ ಎಂದೇಳಿ ಆತನನ್ನು ಸೋಮಲಾಪುರ ಸಮೀಪದ ಕಾಡಿನ ಮಧ್ಯಕ್ಕೆ ಕರೆದೊಯ್ದಿದ್ದಾನೆ. ಬೈಕ್ ನಿಂದ ಇಳಿಯುತ್ತಿದ್ದಂತೆ ಆತನನ್ನು ಹಗ್ಗದಿಂದ ಕಟ್ಟಿ, ಬಟ್ಟೆ ಬಿಚ್ಚಿಸಿ, ಮರಕ್ಕೆ ಕಟ್ಟಿ, ಕಬ್ಬಿಣದ ಸಲಾಕೆ, ದೊಣ್ಣೆಗಳಿಂದ ಥಳಿಸಿದ್ದಾರೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ಸತೀಶ್ ಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.