Saturday, December 27, 2025

ಸಂಶಯದ ಸುಳಿಗೆ ಸಿಲುಕಿದ ದಾಂಪತ್ಯ; ಗಾನವಿ ಸಾವಿನ ಬಳಿಕ ಪತಿ ಕೂಡ ಆತ್ಮಹತ್ಯೆಗೆ ಶರಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಸಂಭವಿಸಿದ ನವವಿವಾಹಿತೆ ಗಾನವಿ (26) ಅವರ ಆತ್ಮಹತ್ಯೆ ಪ್ರಕರಣ ಈಗ ಇಡೀ ಕುಟುಂಬವನ್ನೇ ಬಲಿಪಡೆದ ದುರಂತ ಕಥೆಯಾಗಿ ಮಾರ್ಪಟ್ಟಿದೆ. ಪತ್ನಿಯ ನಿಧನದ ಬೆನ್ನಲ್ಲೇ ಪತಿ ಸೂರಜ್ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ತಾಯಿ ಕೂಡ ಸಾವಿನ ಅಂಚಿನಲ್ಲಿದ್ದಾರೆ.

ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಸೂರಜ್-ಗಾನವಿ ಜೋಡಿ ಶ್ರೀಲಂಕಾಗೆ ಪ್ರವಾಸಕ್ಕೆ ತೆರಳಿತ್ತು. ಆದರೆ, ಅಲ್ಲಿ ಗಾನವಿಯ ವಿವಾಹಪೂರ್ವ ಸಂಬಂಧದ ವಿಚಾರವಾಗಿ ದಂಪತಿ ನಡುವೆ ತೀವ್ರ ಜಗಳ ನಡೆದಿದೆ ಎನ್ನಲಾಗಿದೆ.

ಜಗಳ ವಿಕೋಪಕ್ಕೆ ಹೋದ ಕಾರಣ ಹನಿಮೂನ್ ಮೊಟಕುಗೊಳಿಸಿ ಗಾನವಿ ವಾಪಸ್ ಬೆಂಗಳೂರಿಗೆ ಮರಳಿದ್ದರು. ನಂತರ ಪೋಷಕರ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ಅವರು, ಬ್ರೈನ್ ಡೆಡ್ ಆಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಗಾನವಿಯ ಸಾವಿನಿಂದ ಮನನೊಂದಿದ್ದ ಸೂರಜ್, ನಾಗಪುರಕ್ಕೆ ತೆರಳಿದ್ದರು. ಪತ್ನಿಯ ಕಡೆಯವರ ಆಕ್ರೋಶ ಹಾಗೂ ಅವಮಾನ ತಡೆಯಲಾರದೆ ಅವರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸೂರಜ್ ಅವರೊಂದಿಗೆ ಅವರ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಕೂಡ ಇದ್ದರು. ಸದ್ಯ ಸೂರಜ್ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಸರಣಿ ಆತ್ಮಹತ್ಯೆಗಳ ಹಿಂದಿನ ನಿಖರ ಕಾರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

error: Content is protected !!