ಹೊಸ ದಿಗಂತ ವರದಿ, ದಾವಣಗೆರೆ
ಅಕ್ಕನ ಮಗುವನ್ನು ಅಪಹರಿಸಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕ ಹಾಗೂ ಅಪಹರಣಕ್ಕೊಳಗಾದ ಮಗುವನ್ನು ದಾವಣಗೆರೆ ರೈಲ್ವೇ ಪೊಲೀಸರು ವಶಕ್ಕೆ ಪಡೆದ ಘಟನೆ ಭಾನುವಾರ ವರದಿಯಾಗಿದೆ.
ಬೆಂಗಳೂರಿನಿಂದ ತನ್ನ ಅಕ್ಕನ ಮೂರು ವರ್ಷದ ಗಂಡು ಮಗುವನ್ನು ಅಪಹರಿಸಿಕೊಂಡು 17 ವರ್ಷದ ಅಪ್ರಾಪ್ತ ಯುವಕನನೊಬ್ಬ ನಿಜಾಮುದ್ದೀನ್ ರೈಲಿನಲ್ಲಿ ಹೊರಟಿದ್ದ. ಈ ಬಗ್ಗೆ ದಾವಣಗೆರೆ ರೈಲ್ವೇ ಪೊಲೀಸರಿಗೆ ಬೆಂಗಳೂರು ಪೊಲೀಸರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ರೈಲು ನಗರದ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮಗುವಿನ ಸಮೇತ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪ್ರಾಪ್ತ ಬಾಲಕನ ಅಕ್ಕ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು, ಅಕ್ರಮ ಸಂಬಂಧ ಹೊಂದಿದ್ದ ಬೇರೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ಅಪ್ರಾಪ್ತ ಸಹೋದರ ಸಾಕಷ್ಟು ಹೇಳಿದರೂ ಅಕ್ರಮ ಸಂಬಂಧ ಬಿಡಲು ಆಕೆ ಒಪ್ಪಲಿಲ್ಲ. ಹಾಗಾಗಿ ಆಕೆಯ 3 ವರ್ಷದ ಮಗುವನ್ನು ಎತ್ತಿಕೊಂಡ ಅಪ್ರಾಪ್ತ ಬಾಲಕನು ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನಲ್ಲಿ ತನ್ನ ರಾಜ್ಯಕ್ಕೆ ಹೊರಟಿದ್ದನು ಎನ್ನಲಾಗಿದೆ. ದಾವಣಗೆರೆ ನಿಲ್ದಾಣಕ್ಕೆ ಆಗಮಿಸಿದ ರೈಲನ್ನೇರಿ ತಪಾಸಣೆ ಮಾಡಿದಾಗ ಸಿಕ್ಕಿ ಬಿದ್ದ ಅಪ್ರಾಪ್ತನನ್ನು ಪೊಲೀಸರು ಮಗುವಿನ ಸಮೇತ ವಶಕ್ಕೆ ಪಡೆದು, ರೈಲ್ವೇ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಮುಂದುವರೆಸಿದ್ದಾರೆ.