April 5, 2026
Sunday, April 5, 2026
spot_img

ಸಿರಾಜ್ ಮಾಡಿದ ಒಂದು ಎಡವಟ್ಟು.. ಗುಜರಾತ್ ಟೈಟಾನ್ಸ್‌ಗೆ ಸೋಲಿನ ಪೆಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್‌ನ 9ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ರನ್‌ಗಳ ರೋಚಕ ಸೋಲನ್ನು ಅನುಭವಿಸಿದೆ. ಈ ಸೋಲಿನಲ್ಲಿ ಮೊಹಮ್ಮದ್ ಸಿರಾಜ್ ಮಾಡಿದ ಒಂದು ಸಣ್ಣ ತಪ್ಪು ಪಂದ್ಯದ ಗತಿಯನ್ನೇ ಬದಲಿಸಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಧ್ರುವ್ ಜುರೆಲ್ ನೀಡಿದ ಸುಲಭ ಕ್ಯಾಚ್ ಅನ್ನು ಸಿರಾಜ್ ಕೈಚೆಲ್ಲಿದರು. ಲಾಂಗ್-ಆನ್ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್, ಚೆಂಡನ್ನು ಹಿಡಿದು ಒಳಗೆ ಎಸೆಯಲು ಪ್ರಯತ್ನಿಸಿದರು. ಆದರೆ ಸಮತೋಲನ ಕಳೆದುಕೊಂಡ ಪರಿಣಾಮ ಚೆಂಡು ಬೌಂಡರಿ ಗೆರೆ ದಾಟಿತು. ಇದು ಜುರೆಲ್‌ಗೆ ಕೇವಲ ಜೀವದಾನ ನೀಡಿದ್ದಲ್ಲದೆ, ರಾಜಸ್ಥಾನ್ ಖಾತೆಗೆ 6 ರನ್‌ಗಳನ್ನು ಉಡುಗೊರೆಯಾಗಿ ನೀಡಿತು.

ಕ್ಯಾಚ್ ಬಿಟ್ಟಾಗ ಜುರೆಲ್ ಗಳಿಸಿದ್ದು ಕೇವಲ 11 ರನ್ ಮಾತ್ರ. ಆದರೆ ಈ ಜೀವದಾನದ ಪೂರ್ಣ ಲಾಭ ಪಡೆದ ಜುರೆಲ್, ನಂತರ ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 75 ರನ್ ಚಚ್ಚಿದರು. ಜುರೆಲ್ ಅವರ ಈ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ರಾಜಸ್ಥಾನ್ ರಾಯಲ್ಸ್ 210 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.

ಗುಜರಾತ್ ಟೈಟಾನ್ಸ್ ಅಂತಿಮವಾಗಿ ಹೋರಾಡಿ ಸೋತಿದ್ದು ಕೇವಲ 6 ರನ್‌ಗಳ ಅಂತರದಿಂದ. ಒಂದು ವೇಳೆ ಸಿರಾಜ್ ಆ ಕ್ಯಾಚ್ ಹಿಡಿದಿದ್ದರೆ ಅಥವಾ ಸಿಕ್ಸರ್ ಆಗದಂತೆ ತಡೆದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ಈ ಸೋಲಿನೊಂದಿಗೆ ಗುಜರಾತ್ ತಂಡವು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.

ಟೈಟಾನ್ಸ್ ಪಡೆ ಈಗ ಏಪ್ರಿಲ್ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದ್ದು, ಆ ಪಂದ್ಯದ ಮೂಲಕ ತನ್ನ ಮೊದಲ ಗೆಲುವಿನ ಹಳಿಗೆ ಮರಳುವ ನಿರೀಕ್ಷೆಯಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !