ಹೊಸದಿಗಂತ ವರದಿ, ಮೈಸೂರು :
ಮಹಿಳೆಯೊಬ್ಬಳು ತನ್ನ ಗಂಡು ಮಗುವನ್ನು ಪೊಲೀಸ್ ಠಾಣೆಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಳ್ಳೇಗಾಲದ ನಿವಾಸಿ ಶಶಿಕುಮಾರ್ ಎಂಬುವರ ಪತ್ನಿ ಸಿಂಧೂ ಮಗು ಬಿಟ್ಟು ಪರಾರಿಯಾದವಳು.
ಫಾಸ್ಟ್ ಫುಡ್ ವ್ಯಾಪಾರ ಮಾಡುವ ಶಶಿಕುಮಾರ್ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಸಿಂಧೂ ಎಂಬಾಕೆಯನ್ನ ವಿವಾಹವಾಗಿದ್ದರು.ಇವರಿಗೆ ಅದ್ವಿಕ್ ಎಂಬ ಮಗು ಇದೆ.ಜೂನ್ ೧೫ ರಂದು ದಂಪತಿ ಮಗು ಸಮೇತ ಮೈಸೂರಿಗೆ ಬಂದಿದ್ದರು.
ಈ ವೇಳೆ ಸ್ನೇಹಿತೆಯ ಜೊತೆ ಹೊರಟು ಮರುದಿನ ಪತಿಗೆ ಫೋನ್ ಮಾಡಿ ಚಾಮುಂಡಿಬೆಟ್ಟಕ್ಕೆ ಹೋಗೋಣ ಎಂದು ಸಿಂಧೂ ಕರೆದಿದ್ದಳು.ಪತ್ನಿಯ ಕರೆಗೆ ಸ್ಪಂದಿಸಿ ಚಾಮುಂಡಿಬೆಟ್ಟದ ಪಾದದ ಬಳಿಗೆ ಬಂದಾಗ ಸಿಂಧೂ ಕಾಣಿಸಲಿಲ್ಲ.ಪತ್ನಿಗಾಗಿ ಹುಡುಕಾಡುತ್ತಿದ್ದಾಗ ಮೊಬೈಲ್ ನಲ್ಲಿ ಸಂಪರ್ಕಿಸಿದ ಸಿಂಧೂಮಗುವನ್ನು ಮೈಸೂರಿನ ಪೊಲೀಸ್ ಠಾಣೆಯಲ್ಲಿ ಬಿಟ್ಟಿದ್ದೇನೆ ತಗೋ ಎಂದು ತಿಳಿಸಿ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಠಾಣೆಗೆ ಆಗಮಿಸಿದ ಶಶಿಕುಮಾರ್ ಮಗ ಅದ್ವಿಕ್ ನನ್ನ ತಮ್ಮ ವಶಕ್ಕೆ ಪಡೆದಿದ್ದಾರೆ.
ಸಿಂಧೂ ಪರಾರಿಯಾಗಿರುವ ಬಗ್ಗೆ ಶಶಿಕುಮಾರ್ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.