ಹೊಸದಿಗಂತ ವರದಿ,ಮಂಡ್ಯ:
ಸಾವಿನ ಪತ್ರ ಬರೆದಿಟ್ಟು ಕಂದಮ್ಮನ ಕಣ್ಣೇದುರಿನಲ್ಲೇ ತಾಯಿಯೊಬ್ಬಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೆಂಪೇಗೌಡ ಬಡಾವಣೆಯಲ್ಲಿ ಜರುಗಿದೆ.
ಬಡಾವಣೆಯ ಕವಿತಾ (೩೬) ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ಕಣ್ಣೆದುರಿನಲ್ಲೇ ಸಾವಿಗೆ ಶರಣಾಗಿದ್ದಾಳೆ. ಮಗುವಿಗೆ ಕಟ್ಟಿದ್ದ ಜೋಕಾಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ತಾಯಿಗಾಗಿ ಕಂದಮ್ಮ ಜೋರಾಗಿ ಆಕ್ರಂದಿಸುತ್ತಿತ್ತು. ಮಧ್ಯಾಹ್ನ ೧೨.೩೦ರಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದರೂ ಮಧ್ಯಾಹ್ನ ೩ರವರೆಗೂ ಯಾರಿಗೂ ಗೊತ್ತಾಗಲೇ ಇಲ್ಲ. ಮಗು ಜೋರಾಗಿ ಅಳುತ್ತಿರುವುದನ್ನು ಕೇಳಿದ ಸ್ಥಳೀಯರು ಕಿಟಕಿಯಲ್ಲಿ ನೋಡಿದಾಗ ಕವಿತಾ ನೇಣಿಗೆ ಶರಣಾಗಿರುವ ದೃಶ್ಯ ಕಂಡುಬoದಿತು.
ಕವಿತಾ ೯ ವರ್ಷದ ಹಿಂದೆ ದೈಹಿಕ ಶಿಕ್ಷಕ ರವಿಕುಮಾರ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ೭ ವರ್ಷದ ಗಂಡು ಮಗು, ೧ ವರ್ಷದ ಹೆಣ್ಣು ಮಗು ಇದೆ. ಬುಧವಾರ ಬೆಳಗ್ಗೆ ಶಾಲೆಗೆ ರವಿಕುಮಾರ್ ಶಾಲೆಗೆ ತೆರಳಿದ್ದರೆ, ಇತ್ತ ಮನೆಯಲ್ಲಿ ಪತ್ನಿ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೆ ನಿಖರ ಕಾರಣ ಇದುವರೆಗೂ ತಿಳಿದುಬಂದಿಲ್ಲ.
ಆತ್ಮಹತ್ಯೆಗೂ ಮುನ್ನ ಕವಿತಾ ಬರೆದಿರುವ ಸಾವಿನ ಪತ್ರದಲ್ಲಿ ಇಂದು ನನ್ನ ಜೀವನದ ಕೊನೆಯ ದಿನ. ನನ್ನ ಎಲ್ಲಾ ದೇವರಲ್ಲಿ ಪ್ರಾರ್ಥಿಸಿದ್ದೇನೆ. ನನ್ನ ಎಲ್ಲಾ ಆಭರಣಗಳು ನನ್ನ ಮಗ ಮತ್ತು ಮಗಳಿಗೆ ಸೇರಬೇಕು. ಇಲ್ಲವಾದರೆ ನಾನು ಮತ್ತು ನನ್ನ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ಇವು ನಾನು ಕಷ್ಟಪಟ್ಟು ದುಡಿದು ಮಾಡಿಸಿದ ಆಭರಣಗಳು ಎಂದು ಬರೆದಿದ್ದಾಳೆ. ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.