ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ: ಭಾರತದ ಸಂಸ್ಕೃತಿಯಲ್ಲಿ ಹೋಳಿ ಹಬ್ಬಕ್ಕೆ ವಿಶೇಷ ಸ್ಥಾನ. ಹೋಳಿ ಆಚರಣೆ ಎಂದರೆ ಅದು ವರ್ಣನಾತೀತ. ಒಕಳಿ ಆಟದ ಜೊತೆಗೆ ಕಾಮಣ್ಣ ಮೂರ್ತಿ ಕೂಡಿಸುವುದು, ದಹನ ಎಲ್ಲವೂ ಪರಂಪರಾಗತ.
ಕಾಲಕಳೆದಂತೆ ಹಬ್ಬದಲ್ಲಿ ಅನೇಕ ಹೊಸ ಮಾರ್ಪಾಡುಗಳಾಗಿವೆ. ಸದ್ಯ ಬನಹಟ್ಟಿಯಲ್ಲಿ ಕಾಮಣ್ಣ ಮೂರ್ತಿ ತಯಾರಕರು ಆಧುನಿಕತೆಯ ಪ್ರಭಾವ ಕಂಡು ಹೊಸಬಗೆಯ ಮೂರ್ತಿ ತಯಾರಿಸಿದ್ದಾರೆ. ಪಟ್ಟಣದ ಬಕರೆಯವರ ನಿವಾಸದಲ್ಲಿ ತಯಾರಿಸಿದ ಕಾಮಣ್ಣಗಳು ಒಂದಕ್ಕಿಂತ ಒಂದು ವಿಭಿನ್ನ. ಸ್ಪೈಡರ್ ಮ್ಯಾನ್ ಮೇಲೆ ಕುಳಿತ ಕಾಮಣ್ಣ, ಜೋಕಾಲಿ ಆಡುತ್ತಿರುವ ಕಾಮಣ್ಣ, ಕ್ರಿಕೆಟ್ ಕಾಮಣ್ಣ, ಮೊಬೈಲ್ ಕಾಮಣ್ಣ, ಮಕ್ಕಳ ಛೋಟಾ ಭೀಮ್ ಹೆಗಲ ಮೇಲೆ ಕುಳಿತ ಕಾಮಣ್ಣ, ಗರುಡ ಪಕ್ಷಿಯ ಮೇಲೆ ಕುಳಿತ ಕಾಮಣ್ಣ, ದ್ವಿಚಕ್ರ ವಾಹನ ಮೇಲೆ ಕಾಮಣ್ಣ, ವಿವಿಧ ಪ್ರಾಣಿಗಳ ಮೇಲೆ ಕುಳಿತ ಕಾಮಣ್ಣ ವಿಗ್ರಹಗಳು ಜನರ ಗಮನ ಸೆಳೆಯುತ್ತಿವೆ.
ಕಾಮನ ಹಬ್ಬ ಎಂದಾಕ್ಷಣ ಮೊದಲಿಗೆ ಕಣ್ಣಲ್ಲಿ ಮೂಡುವುದು ಗಡಸ್ಸು ಹಾಗೂ ಸುಂದರ ಮುಖ ಹೊತ್ತು ಕುಳಿತುಕೊಳ್ಳುವ ಗಂಡಸಿನ ಮೂರ್ತಿ. ಇಷ್ಟಕ್ಕೆ ಸಾಲದು ಆತನೊಂದಿಗೆ ಬಿಲ್ಲು ಬಾಣ ಹಾಗೂ ಹೆಗಲ ಮೇಲೊಂದು ಮುದ್ದಾದ ಗಿಳಿ…! ಬನಹಟ್ಟಿಯ ನಾರಾಯಣ ಬಕರೆಯವರ ಮಕ್ಕಳಾದ ವಿಜಯಾನಂದ, ಸಂಜಯ, ನಿತ್ಯಾನಂತ ಹಾಗೂ ನಂದಾ ಬಕರೆಯವರು ಕಾಮಣ್ಣ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಬಕರೆ ಕುಟುಂಬವು ಕಳೆದ 8 ದಶಕಗಳಿಂದ ಈ ವಿಗ್ರಹ ತಯಾರಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಕಾಮಣ್ಣನ ವಿಗ್ರಹಗಳ ಬೇಡಿಕೆ ಹೆಚ್ಚಾಗಿರುವುದರಿಂದ ಮೂರ್ತಿಗಳಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಇದರಿಂದ ಹೊಸಬಗೆಯ ಕಾಮಣ್ಣ ಮೂರ್ತಿಗಳು ಜನರ ಮನ ಸೆಳೆಯುತ್ತಿವೆ.