Wednesday, December 3, 2025

‘ಮಹಾವತಾರ ನರಸಿಂಹ’ ಚಿತ್ರಕ್ಕೆ ಹೊಸ ಮೈಲಿಗಲ್ಲು: ಕರಾಚಿ ದೇವಸ್ಥಾನದಲ್ಲಿ ವಿಶೇಷ ಪ್ರದರ್ಶನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣದ, 2025ರ ಸೂಪರ್ ಹಿಟ್ ಸಿನಿಮಾ ‘ಮಹಾವತಾರ ನರಸಿಂಹ’ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಈ ಚಿತ್ರವು ಕೇವಲ ಭಾರತದಲ್ಲಿ ಯಶಸ್ಸು ಗಳಿಸದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಭಕ್ತ ಪ್ರಹ್ಲಾದನ ಕಥೆ ಆಧಾರಿತ ಈ ಸಿನಿಮಾವು ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಭಾರತದ ಮೊದಲ ಅನಿಮೇಟೆಡ್ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಜೊತೆಗೆ, ಈ ಸಿನಿಮಾ 2026ರ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಅರ್ಹತೆ ಪಡೆದಿದೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು.

ಇದೀಗ, ಈ ಚಿತ್ರ ಮತ್ತೊಂದು ಅಚ್ಚರಿಯ ಮೈಲಿಗಲ್ಲು ತಲುಪಿದೆ. ಪಾಕಿಸ್ತಾನದಲ್ಲೂ ‘ಮಹಾವತಾರ ನರಸಿಂಹ’ ಸಿನಿಮಾ ಪ್ರದರ್ಶನ ಕಂಡಿದೆ! ವಿಶೇಷವಾಗಿ, ಈ ಪ್ರದರ್ಶನವು ಚಿತ್ರಮಂದಿರಗಳಲ್ಲಿ ನಡೆಯದೆ, ಕರಾಚಿಯಲ್ಲಿರುವ ಸ್ವಾಮಿ ನಾರಾಯಣ ಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಭಾರತದಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಈ ಸಿನಿಮಾ, ಬಳಿಕ ಒಟಿಟಿಯಲ್ಲೂ ಧೂಳೆಬ್ಬಿಸಿತ್ತು. ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂ ಸಮುದಾಯದವರು ಈ ಸಿನಿಮಾವನ್ನು ವೀಕ್ಷಿಸಿ ಸಂತೋಷ ಪಡಲೆಂದು, ದೇವಸ್ಥಾನದ ಆವರಣದಲ್ಲಿ ದೊಡ್ಡ ಎಲ್‌ಇಡಿ ಪರದೆಯ ಮೇಲೆ ಸಿನಿಮಾವನ್ನು ಪ್ರದರ್ಶಿಸಲಾಯಿತು. ಸಾವಿರಾರು ಭಕ್ತರು ಒಟ್ಟಾಗಿ ಸೇರಿ ಭಕ್ತಿ ಮತ್ತು ಸಡಗರದಿಂದ ಈ ಐತಿಹಾಸಿಕ ಅನಿಮೇಟೆಡ್ ಚಿತ್ರವನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ.

error: Content is protected !!