ಹೊಸದಿಗಂತ ಡಿಜಿಟಲ್ ಡೆಸ್ಕ್
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ್ತಿ ಅಲಿಸಾ ಹೀಲಿ ತಮ್ಮ ವೃತ್ತಿಜೀವನದ ಅಂತಿಮ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಂಡಿದ್ದಾರೆ. ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಹೀಲಿ ಭದ್ರ ಬುನಾದಿ ಹಾಕಿಕೊಟ್ಟರು. ಕೇವಲ 98 ಎಸೆತಗಳನ್ನು ಎದುರಿಸಿದ ಅವರು 27 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 158 ರನ್ ಚಚ್ಚಿದರು. ಈ ಮೂಲಕ ತಮ್ಮ ವಿದಾಯದ ಪಂದ್ಯದಲ್ಲೇ ಗರಿಷ್ಠ ಸ್ಕೋರ್ ದಾಖಲಿಸಿದ ಬ್ಯಾಟರ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾದರು.
ಹೀಲಿ ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್‌ಗಳಲ್ಲಿ ದಾಖಲೆಯ 407 ರನ್ ಕಲೆಹಾಕಿತು. ಭಾರತೀಯ ಬೌಲರ್‌ಗಳು ಹೀಲಿ ಅವರ ಅಬ್ಬರಕ್ಕೆ ತತ್ತರಿಸಿ ಹೋದರು. ಅಂತಿಮ ಪಂದ್ಯದಲ್ಲಿ ಮೂರಂಕಿ ಮೊತ್ತ ದಾಟುವ ಮೂಲಕ ‘ಫಿನಿಶಿಂಗ್ ಟಚ್’ ನೀಡಿದ ಹೀಲಿ, ಕ್ರಿಕೆಟ್ ಲೋಕದಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ದಾಖಲಿಸಿದ್ದಾರೆ.



