ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಸಜ್ಜಾಗಿದೆ. ಡಿಸೆಂಬರ್ 24ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ‘ಬ್ಲೂಬರ್ಡ್ ಬ್ಲಾಕ್-2’ ಸಂವಹನ ಉಪಗ್ರಹದ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದಾರೆ.
ಯಾವುದೇ ದೊಡ್ಡ ಉಡಾವಣೆಗೆ ಮುನ್ನ ದೇವರ ಅನುಗ್ರಹ ಪಡೆಯುವ ಸಂಪ್ರದಾಯವನ್ನು ಇಸ್ರೋ ಈ ಬಾರಿಯೂ ಮುಂದುವರಿಸಿದೆ. ಇಸ್ರೋ ಮುಖ್ಯಸ್ಥ ಡಾ. ವಿ. ನಾರಾಯಣನ್ ಮತ್ತು ಹಿರಿಯ ವಿಜ್ಞಾನಿಗಳ ತಂಡವು ಏಳು ಬೆಟ್ಟಗಳ ಒಡೆಯನಿಗೆ ವಿಶೇಷ ಪೂಜೆ ಸಲ್ಲಿಸಿ, ಮಿಷನ್‌ನ ಸುಗಮ ಸಾಗುವಿಕೆಗೆ ಪ್ರಾರ್ಥಿಸಿದರು.
ಈ ಕಾರ್ಯಾಚರಣೆಯು LVM3-M6 ರಾಕೆಟ್ ಮೂಲಕ ನಡೆಯಲಿದ್ದು, ಇದು ಅಮೆರಿಕದ ‘ಎಎಸ್ಟಿ ಸ್ಪೇಸ್ ಮೊಬೈಲ್’ ಸಂಸ್ಥೆಯೊಂದಿಗೆ ಮಾಡಿಕೊಂಡ ವಾಣಿಜ್ಯ ಒಪ್ಪಂದದ ಭಾಗವಾಗಿದೆ. ಈ ಬ್ಲೂಬರ್ಡ್ ಉಪಗ್ರಹದ ವಿಶೇಷತೆಗಳು ಹೀಗಿವೆ:
ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಹೈ-ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಒದಗಿಸುತ್ತದೆ.
ಯಾವುದೇ ವಿಶೇಷ ಹಾರ್ಡ್‌ವೇರ್ ಇಲ್ಲದೆ ಮೊಬೈಲ್‌ಗಳಲ್ಲಿ 4G ಮತ್ತು 5G ವಾಯ್ಸ್, ಸ್ಟ್ರೀಮಿಂಗ್ ಮತ್ತು ಡೇಟಾ ಸೇವೆಗಳನ್ನು ಪಡೆಯಬಹುದು.
ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನೇರ ಮೊಬೈಲ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಭಾರತದ ಅತ್ಯಂತ ಬಲಿಷ್ಠ ರಾಕೆಟ್ ಎನಿಸಿಕೊಂಡಿರುವ LVM3, ಶ್ರೀಹರಿಕೋಟಾದ ಎರಡನೇ ಉಡಾವಣಾ ಪ್ಯಾಡ್‌ನಿಂದ ಹಾರಲಿದೆ. ಈ ಉಪಗ್ರಹವನ್ನು ಭೂಮಿಯ ಕೆಳ ಕಕ್ಷೆಗೆ ಸೇರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ವಿಶ್ವಾದ್ಯಂತ ಮೊಬೈಲ್ ಸಂಪರ್ಕದ ಚಿತ್ರಣವನ್ನೇ ಬದಲಿಸಬಲ್ಲ ಈ ಉಡಾವಣೆಯ ಮೇಲೆ ಈಗ ಇಡೀ ಜಗತ್ತಿನ ಕಣ್ಣು ನೆಟ್ಟಿದೆ.

