ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವಂತ ನವಜಾತ ಹೆಣ್ಣುಮಗುವೊಂದು ಸಮಾಧಿ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯ ರೈತರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ಘಟನೆ ಗುಜರಾತ್‌ನ ಸಬರ್ಕಾಂತ ಜಿಲ್ಲೆಯ ಗಂಭೋಯ್ ಗ್ರಾಮದಲ್ಲಿ ನಡೆದಿದೆ.
ಸಮಾಧಿ ಮಾಡಿದ ಸ್ಥಳದಲ್ಲಿ ಹಾದು ಹೋಗುತ್ತಿದ್ದ ವೇಳೆ ಮಗುವಿನ ಕ್ಷೀಣವಾದ ಅಳಲು ಕೇಳಿದ ರೈತರೊಬ್ಬರು ಆಕೆಯ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಆಕೆಯ ಕೈ ಚಾಛಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಕ್ಷಣವೇ ಸಮಾಧಿಯನ್ನು ಅಗೆದು ಮಗು ಜೀವಂತವಾಗಿರುವುದನ್ನು ಖಚಿತ ಪಡಿಸಿಕೊಂಡು ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಅಳುತ್ತಿದ್ದ ಮಗುವನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಗುವನ್ನು ಭೂಮಿಯ ಅಡಿಯಲ್ಲಿ ಹೂತಿದ್ದರಿಂದ ಉಸಿರಾಟದ ತೊಂದರೆ ಎದುರಾಗಿತ್ತು. ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆಕೆಯ ಮೇಲೆ ನಿಗಾ ಇರಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮಗುವಿನ ಪೋಷಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರು ಆಕೆಯ ಪೋಷಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಯ ಯತ್ನದ ಅಪರಾಧಕ್ಕೆ ಸಂಬಂಧಿಸಿದೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.