ಅ. 16 ರಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಮೊದಲ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಕ್ಟೋಬರ್ 16 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಒಮರ್ ಅಬ್ದುಲ್ಲಾ ಅವರಿಗೆ ಆಹ್ವಾನಿಸಿದ್ದಾರೆ.

ಅಬ್ದುಲ್ಲಾ ಅವರಿಗೆ ಬರೆದ ಪತ್ರದಲ್ಲಿ, ಸಿನ್ಹಾ ಅವರು, ‘ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಅವರಿಂದ 2024 ರ ಅಕ್ಟೋಬರ್ 11 ರಂದು ಸರ್ಕಾರ ರಚನೆ ಸಂಬಂಧ ಪತ್ರವನ್ನು ಸ್ವೀಕರಿಸಿದ್ದೇನೆ. ಅದರಲ್ಲಿ ನಿಮ್ಮನ್ನು ಶಾಸಕಾಂಗದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ, ಸಿಪಿಐ(ಎಂ) ಕಾರ್ಯದರ್ಶಿ ಜಿ ಎನ್ ಮಲಿಕ್, ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಕುಮಾರ್ ಗುಪ್ತಾ ಮತ್ತು ಪಕ್ಷೇತರ ಶಾಸಕರಾದ ಪಯಾರೆ ಲಾಲ್ ಶರ್ಮಾ, ಸತೀಶ್ ಶರ್ಮಾ, ಮೊಹಮ್ಮದ್ ಅಕ್ರಮ್, ರಾಮೇಶ್ವರ್ ಸಿಂಗ್ ಮತ್ತು ಮುಜಾಫರ್ ಇಕ್ಬಾಲ್ ಖಾನ್ ಅವರು ಎನ್ ಸಿಗೆ ಬೆಂಬಲ ನೀಡುತ್ತಿರುವ ಪತ್ರವನ್ನು ಸ್ವೀಕರಿಸಿದ್ದೇನೆ ಎಂದು ಮನೋಜ್ ಸಿನ್ಹಾ ಅವರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರವನ್ನು ರಚಿಸಲು ಮತ್ತು ಮುನ್ನಡೆಸಲು ನಿಮ್ಮನ್ನು ಆಹ್ವಾನಿಸಲು ನನಗೆ ಸಂತೋಷವಾಗುತ್ತಿದೆ ಎಂದು ಮನೋಜ್ ಸಿನ್ಹಾ ಹೇಳಿದ್ದಾರೆ.

‘ನಾನು ನಿಮಗೆ ಮತ್ತು ನಿಮ್ಮ ಸಚಿವ ಸಂಪುಟದ ಸದಸ್ಯರಾಗಿ ಸೇರ್ಪಡೆಗೊಳ್ಳಲು ನೀವು ಶಿಫಾರಸು ಮಾಡಿದವರಿಗೆ ಅಕ್ಟೋಬರ್ 16, 2024 ರಂದು ಬೆಳಗ್ಗೆ 11:30 ಕ್ಕೆ ಶ್ರೀನಗರದ SKICC ಯಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸುತ್ತೇನೆ’ ಎಂದು ಸಿನ್ಹಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!