ಹೊಸದಿಗಂತ ವರದಿ ಯಲ್ಲಾಪುರ:
ತಾಲೂಕಿನ ಚವತ್ತಿ ಗ್ರಾಮದಲ್ಲಿ ಇನ್‌ಫ್ಲುಯೆಂಜಾ-ಎ (ಹಂದಿ ಜ್ವರ) ಸೋಂಕಿಗೆ ತುತ್ತಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಚವತ್ತಿ ಗ್ರಾಮದ ನಿವಾಸಿ ರಾಜು ಮಂಜಾ ಗೌಡ (41) ಅವರು ಇನ್‌ಫ್ಲುಯೆಂಜಾ-ಎ (Influenza A) ವೈರಲ್ ಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಾಜು ಮಂಜಾ ಗೌಡ ಅವರಿಗೆ ಜೂನ್ 10ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆ ಉಮ್ಮಚಗಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲಾಗಿತ್ತು. ಬಳಿಕ ಜೂನ್ 12ರಂದು ಮತ್ತೆ ಜ್ವರ ಕಾಣಿಸಿಕೊಂಡ ಕಾರಣ ಮಂಚಿಕೆರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಜೂನ್ 16ರಂದು ಜ್ವರ ಹಾಗೂ ಸುಸ್ತಿನ ಲಕ್ಷಣಗಳು ಹೆಚ್ಚಾದ ಕಾರಣ ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಜೂನ್ 17ರಂದು ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷೆಯಲ್ಲಿ ಇನ್‌ಫ್ಲುಯೆಂಜಾ-ಎ ಸೋಂಕು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 21ರಂದು ಅವರು ಮೃತಪಟ್ಟಿದ್ದಾರೆ. ಸೊಂಕಿಗೆ ತುತ್ತಾಗಿ ಮೃತ ಪಟ್ಟ ರಾಜು ಗೌಡ ಅವರ ಕುಟುಂಬ ಸದಸ್ಯರನ್ನು ತಾಲೂಕು ಯಲ್ಲಾಪುರ ಆಸ್ಪತ್ರೆಗೆ ಕರೆದೊಯ್ದು ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಯಾರಿಗೂ ಸೋಂಕು ಕಂಡು ಬಂದಿಲ್ಲ. ಇದರಿಂದಾಗಿ ಗ್ರಾಮದಲ್ಲಿ ರೋಗ ಬೇರೆಯವರಿಗೆ ಹರಡುವ ಅಪಾಯ ತಪ್ಪಿದೆ.
ಹಂದಿ ಜ್ವರ ಲಕ್ಷಣ
ಇನ್‌ಫ್ಲುಯೆಂಜಾ-ಎ ವೈರಲ್ ಸೊಂಕು ತಗಲಿರುವ ಜ್ವರವು ಮೂಗು, ಗಂಟಲು ಹಾಗೂ ಶ್ವಾಸಕೋಶವನ್ನು ಬಾಧಿಸುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿದೆ. ತೀವ್ರ ಜ್ವರ, ಮೈಕೈ ನೋವು, ಕೆಮ್ಮು, ನೆಗಡಿ, ತಲೆನೋವು, ಗಂಟಲು ನೋವು ಹಾಗೂ ಸುಸ್ತು ಇದರ ಪ್ರಮುಖ ಲಕ್ಷಣಗಳಾಗಿವೆ. ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ.
ಈ ಘಟನೆ ಯಲ್ಲಾಪುರ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಜ್ವರ, ಕೆಮ್ಮು, ನೆಗಡಿ, ಮೈಕೈ ನೋವು, ಗಂಟಲು ನೋವು, ಉಸಿರಾಟದ ತೊಂದರೆ ಅಥವಾ ಅತಿಯಾದ ಸುಸ್ತು ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಅಥವಾ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಹಾಗೂ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ವೈದ್ಯಧಿಕಾರಿ ಡಾ ನರೇಂದ್ರ ಪವಾರ ತಿಳಿಸಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಎದೆನೋವು, ನಿರ್ಜಲೀಕರಣ ಅಥವಾ ಗೊಂದಲದ ಲಕ್ಷಣಗಳು ಕಂಡುಬಂದರೆ ತುರ್ತು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ.



