ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲುಗಳನ್ನು ಹಳಿ ತಪ್ಪಿಸುವ ಹಾಗೂ ರೈಲು ಸೇವೆಯಲ್ಲಿ ವ್ಯತ್ಯಯ ಉಂಟು ಮಾಡಲು ಯತ್ನಿಸುತ್ತಿರುವ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಕಳೆದ ಬುಧವಾರ ಎರಡನೇ ಬಾರಿಗೆ ರೈಲ್ವೆಗೆ ಸೇರಿದ ಅಗ್ನಿಶಾಮಕ ಸಿಲಿಂಡರ್ ರೈಲು ಹಳಿ ಮೇಲೆ ಪತ್ತೆಯಾಗಿತ್ತು. ಇದೀಗ ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ ಪತ್ತೆಯಾಗಿದೆ.
ಭಾನುವಾರ ರಾಯ್ ಬರೇಲಿಯ ರಘುರಾಜ್ ಸಿಂಗ್ ನಿಲ್ದಾಣದ ಬಳಿ ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ ಬಿದ್ದಿರುವುದನ್ನು ನೋಡಿದ ನಂತರ ಲೋಕೋ ಪೈಲಟ್ ಪ್ಯಾಸೆಂಜರ್ ರೈಲನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಳಿಯಿಂದ ಮಣ್ಣನ್ನು ತೆಗೆಯಲಾಗಿದ್ದು, ಮಾರ್ಗದಲ್ಲಿ ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಎಸ್‌ಎಚ್‌ಒ ದೇವೇಂದ್ರ ಭಡೋರಿಯಾ ತಿಳಿಸಿದ್ದಾರೆ. ರೈಲ್ವೆ ಹಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣನ್ನು ಗುಡ್ಡೆ ಹಾಕಲಾಗಿತ್ತು. ಇದರಿಂದಾಗಿ ರಾಯ್ ಬರೇಲಿಯಿಂದ ತೆರಳುತ್ತಿದ್ದ ಶಟಲ್ ರೈಲನ್ನು ನಿಲ್ಲಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.