ಹೊಸದಿಗಂತ ವಿಜಯಪುರ:
ಬಿಸಿಲ ನಗರಿ ವಿಜಯಪುರದಲ್ಲಿ ಮಂಗಳವಾರ ಸಂಜೆ ವರುಣನ ಅಬ್ಬರ ಜೋರಾಗಿದ್ದು, ಜಿಲ್ಲೆಯಾದ್ಯಂತ ಅಕಾಲಿಕ ಆಲಿಕಲ್ಲು ಮಳೆಯಾಗಿದೆ. ಬೇಸಿಗೆಯ ಸುಡುವ ಬಿಸಿಲಿನಿಂದ ಬೆಂದಿದ್ದ ಜನತೆಗೆ ಮಳೆ ತಂಪು ನೀಡಿದೆಯಾದರೂ, ರೈತರ ಪಾಲಿಗೆ ಈ ಮಳೆ ಕಣ್ಣೀರು ತರಿಸಿದೆ.
ಜಿಲ್ಲೆಯ ಮುದ್ದೇಬಿಹಾಳ, ನಿಡಗುಂದಿ, ಬಸವನಬಾಗೇವಾಡಿ, ಕೊಲ್ಹಾರ ಹಾಗೂ ಮುಳವಾಡ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರಿ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಮಳೆಯೊಂದಿಗೆ ಬಿದ್ದ ಆಲಿಕಲ್ಲುಗಳ ಪ್ರಮಾಣ ಎಷ್ಟಿತ್ತೆಂದರೆ, ರಸ್ತೆಗಳೆಲ್ಲವೂ ಬಿಳಿ ಹರಳುಗಳಿಂದ ತುಂಬಿ ಹೋಗಿದ್ದವು. ಈ ದೃಶ್ಯವನ್ನು ಕಂಡ ಸ್ಥಳೀಯರು ಕುತೂಹಲದಿಂದ ಆಲಿಕಲ್ಲುಗಳನ್ನು ಪಾತ್ರೆಗಳಲ್ಲಿ ತುಂಬಿಕೊಂಡು ಸಂಭ್ರಮಿಸಿದರು.
ಜನರಿಗೆ ಮಳೆ ಸಮಾಧಾನ ತಂದಿದ್ದರೂ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೆ ಮಾತ್ರ ಭಾರೀ ನಷ್ಟವುಂಟಾಗಿದೆ. ಮಾಗಿದ ಹಂತದಲ್ಲಿದ್ದ ಬೆಳೆಗಳು ಆಲಿಕಲ್ಲು ಮಳೆಗೆ ಸಿಲುಕಿ ನೆಲಕಚ್ಚಿದ್ದು, ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರು ಈಗ ಆತಂಕಕ್ಕೆ ಒಳಗಾಗಿದ್ದಾರೆ.



