ಹೊಸ ದಿಗಂತ ವರದಿ, ಯಲ್ಲಾಪುರ:
10ಕ್ಕೂ ಹೆಚ್ಚು ಫೈಬ್ರೋಯ್ಡ್ ಗಡ್ಡೆಗಳಿದ್ದ ಗರ್ಭಿಣಿ ಮಹಿಳೆಗೆ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯ ಮೂಲಕ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ತಂಡ ತಾಯಿ ಹಾಗೂ ಮಗುವಿನ ಆರೋಗ್ಯ ಕಾಪಾಡಿದ್ದಾರೆ.
ಗರ್ಭಕೋಶದಲ್ಲಿ ಫೈಬ್ರೋಯ್ಡ್ ಗಡ್ಡೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವಂತದ್ದು. ಅದರಲ್ಲೂ ಹಲವಾರು ಫೈಬ್ರೋಯ್ಡ್ ಗಡ್ಡೆಗಳಿಂದ ಕೂಡಿದ ಮಹಿಳೆ ಗರ್ಭಿಣಿಯಾಗುವುದು ಹಾಗೂ ಸುರಕ್ಷಿತ ಪ್ರಸವವಾಗುವುದು ಶೇಕಡ 40 ಅತಿ ಅಪಾಯದಿಂದ ಕೂಡಿರುವಂಥದ್ದು. ಇಂತಹ ಅಪರೂಪದ ಶಸ್ತ್ರ ಚಿಕಿತ್ಸೆಗೆ ಯಲ್ಲಾಪುರ ತಾಲೂಕು ಆಸ್ಪತ್ರೆ ಸಾಕ್ಷಿಯಾಗಿದೆ.
ಪ್ರಸ್ತುತ 30 ವರ್ಷದ ಮಹಿಳೆಯ ಗರ್ಭಕೋಶದಲ್ಲಿ 10*10 ಸೆಂಟಿ ಮೀಟರ್, 9 *೮ಸೆಂಟಿಮೀಟರ್ ಮತ್ತು ಹತ್ತಕ್ಕೂ ಮಿರಿದ 3*5 ಸೆಂಟಿಮೀಟರ್ ಅಳತೆಯ ಫೈಬ್ರೋಯ್ಡ್ ಗಡ್ಡೆಗಳಿದ್ದು ಆರಂಭದಿಂದ ತಾಲೂಕು ಆಸ್ಪತ್ರೆ ಯಲ್ಲಾಪುರದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾಕ್ಟರ್ ದೀಪಕ್ ವಿ. ಭಟ್ ರ ಮಾರ್ಗದರ್ಶನ ಹಾಗೂ ಚಿಕಿತ್ಸೆಯಿಂದ ನವಮಾಸಗಳನ್ನು ಪೂರೈಸಿರುತ್ತಾರೆ. ಹೀಗೆ ಗಡ್ಡೆಗಳಿದ್ದಾಗ ಗರ್ಭಪಾತ, ಮಲಮೂತ್ರ ವಿಸರ್ಜನೆಯಲ್ಲಿ ತೊಂದರೆ, ಗರ್ಭಕೋಶದಲ್ಲಿ ಶಿಶುವಿನ ಅಡ್ಡ ತಿರುಗುವಿಕೆ, ಹೆರಿಗೆ ನಂತರದ ಹೆಚ್ಚಿನ ರಕ್ತಸ್ರಾವ ಇತ್ಯಾದಿಗಳು ಆಗುವ ಸಂಭವವಿರುತ್ತದೆ.
ಗರ್ಭಕೋಶದ ಕೊರಳಿಗೆ ದೊಡ್ಡ ಫೈಬ್ರೋಯ್ಡ್ ಗಡ್ಡೆಯು ಅಡ್ಡವಿದ್ದುದರಿಂದ ಅಪರೂಪದ ಕ್ಲಿಷ್ಟಕರ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಡಾ. ದೀಪಕ್ ವಿ. ಭಟ್, ಡಾ ವರ್ಷಾ ಮಂಜುನಾಥ, ಸಿಬ್ಬಂದಿಗಳಾದ ಲತಾ ಶೆಟ್ಟಿ, ಸೀಮಾ ಮಡಿವಾಳ ಹಾಗೂ ನಿಂಗಮ್ಮ ತಂಡವು ಯಶಸ್ವಿಯಾಗಿ ತಾಯಿ ಹಾಗೂ ಮಗುವಿನ ಸುರಕ್ಷಿತತೆಗೆ ಶ್ರಮಿಸಿದ್ದಾರೆ. ಮಗುವಿನ ಕೊರಳಸುತ್ತ 4.5 ಸುತ್ತಿನ ಹೊಕ್ಕುಳ ಬಳ್ಳಿ ಇದ್ದುದು ಸಹ ಇನ್ನೊಂದು ವಿಶೇಷವಾಗಿದೆ.