ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಇದು ಹುಸಿ ಬಾಂಬ್ ಬೆದರಿಕೆ ಇರಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.
ಬೆದರಿಕೆ ಮೇಲ್ಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬಾಂಬ್ ನಿಷ್ಕ್ರಿಯ ಸಿಬ್ಬಂದಿ ಪರಿಶೀಲನೆ ಆರಂಭಿಸಿದೆ. ಈಗಾಗಲೇ ಶಾಲೆಯಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಇದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ.
ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಇಮೇಲ್ ಬಂದಿತ್ತು. ಪರಿಶೀಲನೆ ನಂತರ ಅದು ಹುಸಿ ಎಂದು ತಿಳಿದಿತ್ತು. ಬೆದರಿಕೆ ಹಾಕಿದ್ದವರನ್ನು ಬಂಧಿಸಲಾಗಿತ್ತು. ಇದೂ ಕೂಡ ಹುಸಿ ಇರಬಹುದು. ಪೋಷಕರು ಆತಂಕ ಪಡಬೇಕಿಲ್ಲ ಎಂದಿದ್ದಾರೆ.