ಹೊಸದಿಗಂತ ಡಿಜಿಟಲ್ ಡೆಸ್ಕ್:
100 ಅಡಿ ಆಳದ ಬಾವಿಗೆ ಬಿದ್ದು ಮುಳುಗುತ್ತಿದ್ದ ಮಗುವನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ ಈ ಮೇಸ್ತ್ರಿ.
ಹೌದು, ಬೆಳಗಾವಿ ಸಮೀಪದ ಪಾಟ್ನೆ-ಘಟಾ ಗ್ರಾಮದಲ್ಲಿ ಮೂರು ವರ್ಷದ ಬಾಲಕ ಆಕಸ್ಮಿಕವಾಗಿ 100 ಅಡಿ ಆಳದ ಬಾವಿಗೆ ಬಿದ್ದಿದ್ದಾನೆ.
ಆತನನ್ನು ಮೇಸ್ತ್ರಿ ರಾಹುಲ್ ಕಾಟ್ಕರ್ ರಕ್ಷಿಸಿದ್ದಾರೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ರಾಹುಲ್ ಕೆಲಸ ಮಾಡುತ್ತಿದ್ದರು. ಈ ವೇಳೆ ಬಾಲಕ ಬಾವಿಗೆ ಬಿದ್ದಿದ್ದು, ಸಹಾಯಕ್ಕಾಗಿ ಇತರರು ಕೂಗಿದ್ದಾರೆ. ತಕ್ಷಣ ಮೊದಲೇ ಕಟ್ಟಿದ್ದ ಹಗ್ಗದ ಸಹಾಯದಿಂದ ರಾಹುಲ್ ಬಾವಿಗೆ ಇಳಿದಿದ್ದಾರೆ.
ನೀರಿನಲ್ಲಿ ಒದ್ದಾಡುತ್ತಿದ್ದ ಬಾಲಕ ಆಯುಷ್‌ನನ್ನು ಹಿಡಿದುಕೊಂಡು ಹಗ್ಗದ ಸಹಾಯದಿಂದ ಮೇಲೆ ಬಂದಿದ್ದಾರೆ. ಅರ್ಧ ಬಂದ ನಂತರ ಹಗ್ಗ ತುಂಡಾಗಿ ಇಬ್ಬರೂ ಮತ್ತೆ ನೀರಿಗೆ ಬಿದ್ದಿದ್ದಾರೆ. ಅಷ್ಟೊತ್ತಿಗಾಗಲೇ ಗ್ರಾಮಸ್ಥರು ಜಮಾಯಿಸಿದ್ದು, ರಾಹುಲ್ ಕಾಂಬಳೆ ಎನ್ನುವವರು ಬಾವಿಗೆ ಇಳಿದು ಮಗುವನ್ನು ರಕ್ಷಿಸಿದ್ದಾರೆ.
ರಾಹುಲ್ ಕಾಟ್ಕರ್ ಕೈ ಕಾಲಿಗೆ ಏಟಾಗಿದ್ದು, ನೀರಿನಲ್ಲಿ ಮೊಬೈಲ್ ಕಳೆದುಹೋಗಿದೆ. ಸ್ಥಳೀಯರು ಫೋನ್ ಕೊಡಿಸಲು ಮುಂದಾದರೂ ಕಾಟ್ಕರ್ ಅದನ್ನು ಸ್ವೀಕರಿಸಿಲ್ಲ.