May 17, 2026
Sunday, May 17, 2026
spot_img

ರಾಷ್ಟ್ರಪಕ್ಷಿಗೆ ಗೌರವದ ವಿದಾಯ: ಲೈನ್‌ಮ್ಯಾನ್‌ಗಳ ಮಾನವೀಯತೆಗೆ ಸಾಕ್ಷಿಯಾದ ನೂಕಾಪುರ

ಹೊಸದಿಗಂತ ರಾಣೇಬೆನ್ನೂರು

ಕರ್ತವ್ಯದ ಜೊತೆಗೆ ಮಾನವೀಯತೆ ಮತ್ತು ರಾಷ್ಟ್ರಪ್ರೇಮವನ್ನು ಮೆರೆದ ಅಪರೂಪದ ಘಟನೆಯೊಂದು ತಾಲೂಕಿನ ನೂಕಾಪುರ ಸಮೀಪದ ಹೊನ್ನನಾಗದೇವತೆ ದೇವಸ್ಥಾನದ ಬಳಿ ಗುರುವಾರ ಸಂಜೆ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ರಾಷ್ಟ್ರೀಯ ಪಕ್ಷಿ ನವಿಲಿಗೆ ಇಬ್ಬರು ಲೈನ್ ಮ್ಯಾನ್‌ಗಳು ಭಾರತೀಯ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ದೇವಸ್ಥಾನದ ಎದುರಿನ ಜಮೀನೊಂದರಲ್ಲಿರುವ ಜೋಡು ವಿದ್ಯುತ್ ಕಂಬಕ್ಕೆ ಆಕಸ್ಮಿಕವಾಗಿ ತಗುಲಿದ ನವಿಲು ಸ್ಥಳದಲ್ಲೇ ಮೃತಪಟ್ಟಿತ್ತು. ಇದರಿಂದಾಗಿ ವಿದ್ಯುತ್ ಲೈನ್ ಟ್ರಿಪ್ ಆಗಿತ್ತು. ಫಾಲ್ಟ್ ಸರಿಪಡಿಸಲು ಸ್ಥಳಕ್ಕೆ ಆಗಮಿಸಿದ ಹನುಮಾಪುರ ವಿಭಾಗದ ಲೈನ್ ಮ್ಯಾನ್ ಸಂಗಮೇಶ ಕೋಟಿಕಲ್ ಹಾಗೂ ಯಲ್ಲಾಪುರ ವಿಭಾಗದ ಚೇತನ್ ಬಳ್ಳಾರಿ, ಕಂಬದ ಮೇಲೆ ನವಿಲು ಮೃತಪಟ್ಟಿರುವುದನ್ನು ಕಂಡು ಮರುಗಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಲೈನ್ ಮ್ಯಾನ್‌ಗಳು ನವಿಲನ್ನು ಕಂಬದಿಂದ ಕೆಳಗಿಳಿಸಿದರು. ಕೇವಲ ಮೃತದೇಹವನ್ನು ಎಸೆದು ಹೋಗದೆ, ಪಕ್ಕದ ಜಮೀನಿನಲ್ಲಿ ತಾವೇ ಸ್ವತಃ ಗುದ್ದಲಿ-ಶೆಲಕಿಯಿಂದ ಹಳ್ಳ ತೋಡಿದರು. ಗ್ರಾಮಸ್ಥರ ಸಹಕಾರದೊಂದಿಗೆ ನವಿಲಿಗೆ ಪೂಜೆ-ಪುನಸ್ಕಾರ ಸಲ್ಲಿಸಿ, ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದರು. ಈ ಸಂದರ್ಭದಲ್ಲಿ ಲೈನ್ ಮ್ಯಾನ್‌ಗಳಿಬ್ಬರೂ ಭಾವುಕರಾಗಿದ್ದು ನೋಡುಗರ ಕಣ್ಣಂಚನ್ನು ತೇವಗೊಳಿಸಿತ್ತು.

ಲೈನ್ ಮ್ಯಾನ್‌ಗಳ ಈ ಪ್ರಾಮಾಣಿಕ ಮತ್ತು ಕರುಣಾಭರಿತ ಕಾರ್ಯಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಶಂಕರ್ ಚೌವ್ಹಾಣ, ಅರುಣ ರಾಠೋಡ, ಚೇತನ್ ರಾಠೋಡ, ವಾಲಪ್ಪ ಕೇತಾವತ್, ಗುಡ್ಡಪ್ಪ ಮರಡೇರ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದು, ಇಬ್ಬರೂ ನೌಕರರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

“ರಾಷ್ಟ್ರೀಯ ಪಕ್ಷಿ ಹೀಗೆ ಸಾವನ್ನಪ್ಪಿದ್ದು ತುಂಬಾ ದುಃಖ ತಂದಿದೆ. ಆದರೆ ಅದಕ್ಕೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಿದ್ದು ಮನಸ್ಸಿಗೆ ಸ್ವಲ್ಪ ನೆಮ್ಮದಿ ನೀಡಿದೆ.” ಸಂಗಮೇಶ ಕೋಟಿಕಲ್, ಲೈನ್ ಮ್ಯಾನ್.

“ಇವತ್ತು ನವಿಲು ಸಾವನ್ನಪ್ಪಿದ್ದು ಬೇಸರ ತರಿಸಿತು. ರಾಷ್ಟ್ರೀಯ ಪಕ್ಷಿಗೆ ಸಲ್ಲಿಸಬೇಕಾದ ಅಂತಿಮ ನಮನವನ್ನು ನಾವು ಸಲ್ಲಿಸಿದ್ದೇವೆ.” ಚೇತನ್ ಬಳ್ಳಾರಿ, ಲೈನ್ ಮ್ಯಾನ್.

ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಪಕ್ಷಿಗಳನ್ನು ಅನಾಥವಾಗಿ ಬಿಟ್ಟು ಹೋಗುವವರೇ ಹೆಚ್ಚು. ಆದರೆ ಈ ಲೈನ್ ಮ್ಯಾನ್‌ಗಳು ತೋರಿದ ಕಾಳಜಿ ರಾಷ್ಟ್ರೀಯ ಪಕ್ಷಿಗೆ ಸಲ್ಲಿಸಿದ ನಿಜವಾದ ಗೌರವ ಎಂದು ಗ್ರಾಮಸ್ಥರು ಬಣ್ಣಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !