ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ ಕಾಯುವ ಕಾಯಕದಿಂದ ನಿವೃತ್ತಿ ಹೊಂದಿ ವಿಶ್ರಾಂತಿ ಜೀವನ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಮಾಜಿ ಸಿಬ್ಬಂದಿ ಯೋಗೇಶ್ ಕುಮಾರ್, ಸ್ವಂತ ಮಕ್ಕಳ ಆಸ್ತಿ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಪುತ್ರರೇ ಸುಪಾರಿ ನೀಡಿ ತಂದೆಯನ್ನು ಹತ್ಯೆ ಮಾಡಿಸಿರುವ ಘೋರ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಲೋಣಿ ಎಂಬಲ್ಲಿ ನಡೆದಿದೆ.
ಡಿಸೆಂಬರ್ 26 ರಂದು ಯೋಗೇಶ್ ಕುಮಾರ್ ಅವರು ಮನೆಗೆ ಮರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ ಕಬ್ಬಿಣದ ಪೈಪ್‌ನಿಂದ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.
ಕೊಲೆ ನಡೆದ ಐದು ದಿನಗಳ ನಂತರ ಪೊಲೀಸರು ಈ ಪ್ರಕರಣದ ಹಿಂದಿರುವ ರಹಸ್ಯವನ್ನು ಬಯಲಿಗೆಳೆದಿದ್ದಾರೆ. ಯೋಗೇಶ್ ಕುಮಾರ್ ಅವರ ಪುತ್ರರಾದ ನಿತೇಶ್ ಮತ್ತು ಗುಡ್ಡು ತಂದೆಯ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ತಂದೆಯ ಹೆಸರಿನಲ್ಲಿದ್ದ ಮನೆಯನ್ನು ಮಾರಾಟ ಮಾಡುವಂತೆ ಇಬ್ಬರು ಮಕ್ಕಳು ಪದೇ ಪದೇ ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ಹಿಂದೆ ಯೋಗೇಶ್ ಕುಮಾರ್ ಪೊಲೀಸರಿಗೂ ದೂರು ನೀಡಿದ್ದರು.
ನೆರೆಮನೆಯ ಅರವಿಂದ್ ಕುಮಾರ್ (32) ಎಂಬಾತನಿಗೆ ತಂದೆಯನ್ನು ಕೊಲ್ಲಲು ಈ ಕಿರಾತಕ ಪುತ್ರರು 5 ಲಕ್ಷ ರೂಪಾಯಿ ನೀಡಿದ್ದರು. ಅರವಿಂದ್ ತನ್ನ ಸೋದರಮಾವ ನವೀನ್ ಜೊತೆಗೂಡಿ ಈ ಹತ್ಯೆಯನ್ನು ಮಾಡಿದ್ದಾನೆ.
ಲೋಣಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿದ್ಧಾರ್ಥ ಗೌತಮ್ ನೇತೃತ್ವದಲ್ಲಿ ತನಿಖೆ ನಡೆಸಿದ ವಿಶೇಷ ತಂಡವು ಆರೋಪಿ ಅರವಿಂದ್‌ನನ್ನು ಬಂಧಿಸಿದೆ. ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕೊಲೆಗೆ ಬಳಸಿದ ಪಿಸ್ತೂಲ್, ಕಾರ್ಟ್ರಿಡ್ಜ್‌ಗಳು, ಕಬ್ಬಿಣದ ಪೈಪ್ ಮತ್ತು ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ಆರೋಪಿ ಅರವಿಂದ್‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿ ಅರವಿಂದ್ ಈ ಮೊದಲೇ ದರೋಡೆ ಮತ್ತು ವಂಚನೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

