ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ರೌಡಿಶೀಟರ್ ವ್ಯಕ್ತಿಯೋರ್ವನನ್ನು ಸ್ನೇಹಿತರೇ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ತಾಲೂಕಿನ ಹುಲಿಕೆರೆ ಗ್ರಾಮದ ಬಳಿ ನಡೆದಿದೆ.
ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಂತ ಸುಧೀರ್ (35) ಎಂಬಾತನನ್ನು ಹಾಡು ಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಜನರು ಬೆಚ್ಚಿ ಬೀಳುವಂತೆ ಮಾಡಿದೆ.
ರೌಡಿ ಶೀಟರ್ ಸುಧೀರ್ ಹಾಗೂ ಪೂರ್ಣಚಂದ್ರ ಮತ್ತು ಮೂರ್ನಾಲ್ಕು ಜನ ಸ್ನೇಹಿತರು ಜೊತೆಗೂಡಿ ಗುರುವಾರ ಬೆಳಿಗ್ಗೆ ಪಾರ್ಟಿ ಮಾಡಿ ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಸ್ನೇಹಿತ ಪೂರ್ಣಚಂದ್ರ ಹಾಗೂ ಸ್ನೇಹಿತರು ಸುಧೀರ್ ಜೊತೆ ಸಣ್ಣಪುಟ್ಟ ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಪಾರ್ಟಿಯಿಂದ ಹೊರನಡೆದ ಸುಧೀರ್ ತನ್ನ ಮನೆಗೆ ತೆರಳಿದ್ದಾನೆ.
ನಂತರ ಹುಲಿಕೆರೆಯ ರಸ್ತೆ ಬಳಿಗೆ ಬಂದ ರೌಡಿ ಶೀಟರ್ ಸುಧೀರ್ ನನ್ನು ಪೂರ್ಣಚಂದ್ರ ಹಾಗೂ ಸ್ನೇಹಿತರು ಹಿಂಬಾಲಿಸಿ ನಡು ರಸ್ತೆಯಲ್ಲೆ ಸುಧೀರ್ ಕುತ್ತಿಗೆ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಕೆಆರ್ಎಸ್ ಪೊಲೀಸ್ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಸುಧೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ತನ್ನ ಸ್ನೇಹಿತರೇ ರೌಡಿ ಶೀಟರ್ ಸುಧೀರ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು, ಹಳೆ ದ್ವೇಷವೇ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.