ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಅರ್ಚಕರೊಬ್ಬರನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದ್ದು, ಬಿಹಾರಕ್ಕೆ ಬಿಹಾರವೇ ಬೆಚ್ಚಿಬಿದ್ದಿದೆ.
ಮನೋಜ್ ಕುಮಾರ್ ಎಂಬ ಮೂವತ್ತೆರಡು ವರ್ಷ ವಯಸ್ಸಿನ ಅರ್ಚಕರು ದಾನಾಪುರ ಗ್ರಾಮದ ಶಿವನ ದೇವಸ್ಥಾನದಿಂದ ಮಧ್ಯರಾತ್ರಿ ಹೊರಟವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಗಳವಾರ ಮನೆಮಂದಿ ಪೊಲೀಸರಿಗೆ ದೂರನ್ನೂ ನೀಡಿದ್ದರು. ಇದೀಗ ಮನೋಜ್ ಅವರ ಶವ ಕಣ್ಣುಗಳನ್ನು ಕಿತ್ತು ಭೀಕರವಾಗಿ ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶವ ಪತ್ತೆಯಾಗುತ್ತಿದ್ದಂತೆಯೇ ಗ್ರಾಮದಲ್ಲಿ ಘರ್ಷಣೆ ಸ್ಥಿತಿ ನಿರ್ಮಾಣಾವಗಿದ್ದು, ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆಯೇ ಪೊಲೀಸರು ದಾನಾಪುರಕ್ಕೆ ಧಾವಿಸಿದ್ದು, ಹೆಚ್ಚುವರಿ ಬಂದೋಬಸ್ತ್ ಕೈಗೊಂಡಿದ್ದರು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದೆ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ