ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಸಂಪ್ರದಾಯ, ಭಕ್ತಿ ಮತ್ತು ಸೌಹಾರ್ದದ ಪ್ರತೀಕವಾಗಿರುವ ಬೆಂಗಳೂರು ಕರಗ ಉತ್ಸವ ಈ ವರ್ಷವೂ ಅದ್ದೂರಿಯಾಗಿ ನೆರವೇರಿತು.
ಬುಧವಾರ ತಡರಾತ್ರಿ ನಗರದ ಹೃದಯಭಾಗ ಭಕ್ತರ ಜಯಘೋಷದಿಂದ ಮೊಳಗಿದರೆ, ಮಲ್ಲಿಗೆ ಹೂಗಳಿಂದ ಅಲಂಕರಿಸಲ್ಪಟ್ಟ ದ್ರೌಪದಿದೇವಿಯ ಕರಗ ರಾತ್ರಿಯಿಡೀ ನಗರ ಬೀದಿಗಳಲ್ಲಿ ಸಂಚರಿಸಿ ಆಧ್ಯಾತ್ಮಿಕ ವಾತಾವರಣ ಸೃಷ್ಟಿಸಿತು.
ಸತತ 16ನೇ ಬಾರಿಗೆ ಅರ್ಚಕ ಎ. ಜ್ಞಾನೇಂದ್ರ ಅವರು ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗವನ್ನು ಹೊತ್ತು ಹೊರಬಂದರು. ವೀರಕುಮಾರರ ಘೋಷಣೆ, ಭಕ್ತರ ಗೋವಿಂದ ನಾಮಸ್ಮರಣೆ ಮತ್ತು ಹೂವಿನ ಸಮರ್ಪಣೆಯ ನಡುವೆ ಮೆರವಣಿಗೆ ಪೇಟೆಗಳ ಮುಖ್ಯರಸ್ತೆಗಳು ಹಾಗೂ ಗಲ್ಲಿಗಳಲ್ಲಿ ಸಂಭ್ರಮದಿಂದ ಸಾಗಿತು.
ಇದನ್ನೂ ಓದಿ:
ಮಲ್ಲಿಗೆ ಹೂಗಳಿಂದ ಅಲಂಕೃತಗೊಂಡ ಕರಗ ಈ ಬಾರಿ ನಗರದ 25 ಪೇಟೆಗಳಲ್ಲಿ ಸಂಚರಿಸಿ, ಸೌಹಾರ್ದದ ಸಂಕೇತವಾದ ಮಸ್ತಾನ್ ಸಾಬ್ ದರ್ಗಾಗೂ ಭೇಟಿ ನೀಡಿತು. ಅಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆ ಹಾಗೂ ಮೂರು ಪ್ರದಕ್ಷಿಣೆಗಳು ನೆರವೇರಿಸಲಾಯಿತು. ಈ ಆಚರಣೆ ಧಾರ್ಮಿಕ ಐಕ್ಯತೆಯ ಪ್ರತೀಕವಾಗಿ ಮತ್ತೊಮ್ಮೆ ಗಮನ ಸೆಳೆಯಿತು.
ಹಲವು ಗಣ್ಯರು ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರು ಈ ಐತಿಹಾಸಿಕ ಉತ್ಸವವನ್ನು ಕಣ್ತುಂಬಿಕೊಂಡರು.



