ಹೊಸದಿಗಂತ ವರದಿ, ಗೋಕರ್ಣ:
ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದ್ದ ಹಿರಿಯ ಜೀವ ಡಾ. ಎಸ್.ವಿ.ಜಠಾರ್(92) ಅವರು ಸಾರ್ವಜನಿಕ ಅಭಿನಂದನೆ ಸ್ವೀಕರಿಸಿದ ಮರುದಿನವೇ ಸ್ವರ್ಗಸ್ಥರಾಗುವ ಮೂಲಕ ಅವರ ಅಪಾರ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ.
ರಾ.ಸ್ವ.ಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಇವರು ಜನಸಂಘ ಮತ್ತು ಇಂದಿನ ಬಿಜೆಪಿಯನ್ನು ಗೋಕರ್ಣ ಮತ್ತು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದವರು. ಇವರ ಗರಡಿಯಲ್ಲಿ ಪಳಗಿದವರು ಇಂದು ಪಕ್ಷದಲ್ಲಿ ವಿವಿಧ ಹುದ್ದೆಯಲ್ಲಿದ್ದಾರೆ.
ಯಾವುದೇ ಅಧಿಕಾರ ಬಯಸದೇ ತೆರೆಯ ಮರೆಯಲ್ಲಿ ಸೇವೆ ಸಲ್ಲಿಸುತ್ತ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದವರು.
ಸನ್ಮಾನ- ಮರಣ:
ಇವರ ಸೇವೆಯನ್ನು ಗೌರವಿಸಿ ಪಕ್ಷ ಮತ್ತು ಸಾರ್ವಜನಿಕವಾಗಿ ಗೌರವಿಸುವ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸಿದ್ದತೆ ನಡೆಸಿ ಡಾ. ಎಸ್.ವಿ. ಜಠಾರ್ ಅಭಿಮಾನಿ ಬಳಗದಿಂದ ಶನಿವಾರವಷ್ಟೇ ಅವರಿಗೆ ಸನ್ಮಾನ ಗೌರವ ಸಲ್ಲಿಸಲಾಗಿತ್ತು. ಇವರ ಕುರಿತಾಗಿ ಸಾಕ್ಷ್ಯ ಚಿತ್ರವನ್ನು ಸಹ ಬಿಡುಗಡೆ ಮಾಡಲಾಗಿತ್ತು. ಸಂಘದ ಪ್ರಮುಖರಾದ ಮಂಗೇಶ ಭೇಂಡೆ, ಹನುಮಂತ ಶಾನಭಾಗ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ವಿಪ ಸದಸ್ಯ ಶಾಂತಾರಾಮ ಸಿದ್ದಿ, ಸನ್ಮಾನ ಸಮಿತಿಯ ರವಿ ಗುನಗಾ, ಗೋಪಾಲಕೃಷ್ಣ ಭಟ್ ಮತ್ತಿತರರು ಪಾಲ್ಗೊಂಡಿದ್ದರು.
ಕೆಲ ದಿನಗಳಿಂದ ತುಸು ಅನಾರೋಗ್ಯದಲ್ಲಿದ್ದರು. ಇವರ ನಿಧನಕ್ಕೆ ಹಲವು ಪ್ರಮುಖರು ಕಂಬನಿ ಮಿಡಿದಿದ್ದಾರೆ.