ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂದೂರ ನಡೆದಿದೆ. ಇದಾದ ನಂತರ ಕದನ ವಿರಾಮ ಘೋಷಣೆಯಾಗಿದ್ದರೂ ಕುತಂತ್ರಿ ಪಾಕ್ ದಾಳಿ ಮಾಡುತ್ತಲೇ ಇತ್ತು. ಆದರೆ ಭಾರತದ ಎದುರೇಟಿಗೆ ಪಾಕಿಸ್ತಾನ ಪತರುಗುಟ್ಟಿದ್ದು, ಕಡೆಗೂ ಶಾಂತಿ ಮಂತ್ರ ಹಾಡೋಕೆ ಸಿದ್ಧವಾಗಿದೆ.
ಪಾಕಿಸ್ತಾನ ಶಾಂತಿಗಾಗಿ ತೊಡಗಿಸಿಕೊಳ್ಳಲು ಸಿದ್ಧವಾಗಿದೆ, ಮಾತನಾಡೋಣ ಬನ್ನಿ ಎಂದು ಪ್ರಧಾನಿ ಶೆಹಬಾಜ್ ಶರೀಫ್ ಭಾರತದಕ್ಕೆ ಮನವಿ ಮಾಡಿದ್ದಾರೆ.
ಭಾರತದೊಂದಿಗಿನ ಮಿಲಿಟರಿ ಮುಖಾಮುಖಿಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಲು ಗುರುವಾರ ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶೆಹಬಾಜ್ ಈ ಹೇಳಿಕೆಗಳನ್ನು ನೀಡಿದ್ದಾರೆ.
ಶಾಂತಿಗಾಗಿ ನಾವು ಭಾರತದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ. ಶಾಂತಿಗಾಗಿ ಷರತ್ತುಗಳು ಕಾಶ್ಮೀರ ಸಮಸ್ಯೆಯನ್ನೂ ಒಳಗೊಂಡಿವೆ ಎಂದು ಶೆಹಬಾಜ್ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿರುತ್ತವೆ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.