ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ವಿಚಿತ್ರ ವೇಷ ಧರಿಸಿದ್ದ ಆರೋಪಿಯೊಬ್ಬನನ್ನು ಮಥುರಾ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. 50 ವರ್ಷ ವಯಸ್ಸಿನ ರಾಜೇಂದ್ರ ಸಿಸೋಡಿಯಾ ಬಂಧಿತ ಆರೋಪಿ.
ಕೆಲ ದಿನಗಳ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ರಾಜೇಂದ್ರ ಸಿಸೋಡಿಯಾ, ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಪೊಲೀಸರು ತನ್ನನ್ನು ಗುರುತಿಸಬಾರದು ಎಂಬ ಕಾರಣಕ್ಕೆ ಈತ ಅತ್ಯಂತ ಚಾಣಾಕ್ಷತನದಿಂದ ಹೆಣ್ಣಿನ ವೇಷ ಧರಿಸುತ್ತಿದ್ದ. ಬುರ್ಖಾ ತೊಟ್ಟು, ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಮಹಿಳೆಯಂತೆ ಓಡಾಡುತ್ತಾ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ.
ಆರೋಪಿ ಎಷ್ಟೇ ಜಾಣ್ಮೆ ಪ್ರದರ್ಶಿಸಿದರೂ ಮಥುರಾ ಪೊಲೀಸರ ತನಿಖಾ ಕೌಶಲದ ಮುಂದೆ ಆತನ ಆಟ ನಡೆಯಲಿಲ್ಲ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು, ಆತ ವೇಷ ಮರೆಸಿಕೊಂಡಿದ್ದ ರಾಜೇಂದ್ರ ಸಿಸೋಡಿಯಾ ಎಂಬುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.


